ಬೇಲೂರು: ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನೀಟ್ ಪರೀಕ್ಷೆಯಲ್ಲಿ ಈಗಾಗಲೇ ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಅಕ್ರಮ ಪಾಲುದಾರರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಮತ್ತು ಮರುಪರೀಕ್ಷೆ ನಡೆಸುವ ಸಂದರ್ಭದಲ್ಲಿ ಜಾಗೃತಿಯನ್ನು ವಹಿಸಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಹಾಸನ ಜಿಲ್ಲಾ ಉಪಾಧ್ಯಕ್ಷ ವರುಣ್ಗೌಡ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಾತಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಜೊತೆಗೆ ಈಗಾಗಲೇ ನಡೆದಿರುವ ಪರೀಕ್ಷೆಯನ್ನು ರದ್ದುಪಡಿಸಿ, ಮರುಪರೀಕ್ಷೆಯನ್ನು ನಡೆಸಲು ಮುಂದಾಗಬೇಕಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ಯಾವುದೇ ತೊಂದರೆಯಾದಂತೆ ಕ್ರಮವನ್ನು ವಹಿಸಬೇಕಿದೆ.
ಕಾರಣ ಮೊದಲ ಪರೀಕ್ಷೆಯಲ್ಲಿನ ಉತ್ಸಾಹ ಪುನಃ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯತೆ ಇಳಿಮುಖವಾಗಿರುವ ನಿಟ್ಟಿನಲ್ಲಿ ಈ ಬಗ್ಗೆ ಸಂಬಂಧ ಪಟ್ಟವರು ಅತ್ಯಂತ ಜಾಗೃತಿಯನ್ನು ವಹಿಸಬೇಕಿದೆ ಎಂದು ಆಗ್ರಹಿಸಿದ ಅವರು ವೈದ್ಯಕೀಯ ಪ್ರವೇಶಾತಿಗೆ ದೇಶದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ವೈದ್ಯಕೀಯ ಅಧ್ಯಯನದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ನೀಟ್ ಪರೀಕ್ಷೆ ಅಕ್ರಮದಿಂದ ದೇಶದಲ್ಲಿ ಕೆಲವು ವಿದ್ಯಾರ್ಥಿಗಳ ಮನಃನೊಂದು ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ಶೋಚನೀಯವಾಗಿದೆ.
ಅದ್ದರಿಂದ ಸರ್ಕಾರ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ವಿಶೇಷವಾಗಿ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಬಗ್ಗೆ ಉನ್ನತಮಟ್ಟದಲ್ಲಿಯೇ ತನಿಖೆ ನಡೆಸುವ ಅಗತ್ಯವಿದೆ. ನೀಟ್ ಪರೀಕ್ಷಾ ಫಲಿತಾಂಶವನ್ನು ತರಾತುರಿಯಲ್ಲಿ ಘೋಷಿಸಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿದೆ ಎಂದು ಆರೋಪಿಸಿದರು.
ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ತಂದಿರುವ ನೀಟ್ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರ ಜಾಣ ಮೌನಕ್ಕೆ ಜಾರಿದೆ.ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾದರೂ ಸೂಕ್ತ ತನಿಖೆ ನಡೆಸುತ್ತಿಲ್ಲ, ನೀಟ್ ಅಕ್ರಮ ನಡೆದ ಬಗ್ಗೆ ಪರೀಕ್ಷಾ ಫಲಿತಾಂಶವೇ ಬೆಳಕು ಚೆಲ್ಲುತ್ತಿದ್ದರೂ ಸಂಬಂಧ ಪಟ್ಟವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ರ್ಯಾಂಕ್ ಬಂದಿರುವ ವಿದ್ಯಾರ್ಥಿಗಳು ಇಂದೇ ತರಬೇತಿ ಕೇಂದ್ರದವರಾಗಿದ್ದಾರೆ ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ನಡುವೆ ಚೆಲ್ಲಾಟ ಆಡುವ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ತೀವ್ರ ಮಾನಸಿಕ ಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಗಂಬೀರವಾಗಿ ಪರಿಗಣಿಸಿ ನ್ಯಾಯ ನೀಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದ ಅವರು ಹಾಸನ ಜಿಲ್ಲೆಯಲ್ಲಿ ಹಲವು ವಿದ್ಯಾರ್ಥಿಗಳಿಗೂ ಅನ್ಯಾಯವಾದ ಬಗ್ಗೆ ತಿಳಿಸಿದರು.



