ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರನ್ನು ಕಾಡುತ್ತಿದ್ದ ತೊಡೆ ಸಂಧುವಿನ ನೋವು ಈಗ ಇಲ್ಲ. ಅವರು ಚೆನ್ನಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಅಂತಿಮ ಹಂತದ ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರ ತರಬೇತುದಾರ, ಜರ್ಮನಿಯ ಕ್ಲಾಸ್ ಬಾರ್ಟೊನೀಜ್ ಹೇಳಿದ್ದಾರೆ.
ನೀರಜ್ ಅವರು ಟೋಕಿಯೊ ಒಲಿಂಪಿಕ್ಸ್ನಲ್ಲಿ (2020) ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಇದೇ 26ರಿಂದ ಶುರುವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ ಅವರು ಚಿನ್ನದ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ. ಆದರೆ ಈಚೆಗೆ ಅವರಿಗೆ ತೊಡೆಯ ಗಾಯ ಕಾಡಿತ್ತು.
ಆದ್ದರಿಂದ ಅವರ ಸಾಮರ್ಥ್ಯದ ಕುರಿತ ಆತಂಕವೂ ಎದುರಾಗಿತ್ತು. ಇದೀಗ ಕ್ಲಾಸ್ ಅವರು ‘ಯಾವುದೇ ತೊಂದರೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾವು ಯೋಜಿಸಿದಂತೆಯೇ ಎಲ್ಲವೂ ನಡೆದಿದೆ. ಈ ಕ್ಷಣದಲ್ಲಿಯೂ ಅವರಿಗೆ ತೊಂದರೆ (ತೊಡೆ ಸಂಧುವಿನ ಲಘು ನೋವು) ಇಲ್ಲ. ಒಲಿಂಪಿಕ್ಸ್ ಮುಗಿಯುವವರೆಗೂ ಇದೇ ಸ್ಥಿತಿ ಮುಂದುವರೆಯುವ ಭರವಸೆ ಇದೆ’ ಎಂದು ಕ್ಲಾಸ್ ಹೇಳಿದ್ದಾರೆ.