ಬೊಮ್ಮನಹಳ್ಳಿ: ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸಿದರೆ ಮಕ್ಕಳು ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದಾಗಿ ರಾಜ್ಯ ಸಭಾ ಮಾಜಿ ಸದಸ್ಯ ಡಿ.ಕುಪೇಂದ್ರರೆಡ್ಡಿ ತಿಳಿಸಿದರು.ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಗಮ್ಮನಪಾಳ್ಯದ ಮದೀನಾನಗರ ನಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆ ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವಿಚಾರ ಮತ್ತು ಜ್ಞಾನ ವೃದ್ಧಿಯಾಗಿ ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚು ಕ್ರೀಯಾಶೀಲರಾಗುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡುತ್ತ ಮದೀನ ನಗರದಲ್ಲಿ ಒಂದು ಸುಸಜ್ಜಿತವಾದ ಉರ್ದುಶಾಲೆಯನ್ನು ನಿರ್ಮಿಸಬೇಕು ಇದರ ಫಲವಾಗಿ ಸಾವಿರಾರು ಸಂಖ್ಯೆಯಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳು ಇಲ್ಲಿ ವಿದ್ಯೆಯನ್ನು ಕಲಿತು ಮುಖ್ಯವಾಹಿನಿಗೆ ಬರಬೇಕು ಎಂಬದಾಗಿ ನಮ್ಮ ಬಿಜೆಪಿ ಮುಸ್ಲಿಂ ಮೋರ್ಚಾ ಅಲ್ಪಸಂಖ್ಯಾತ ರಾಜ್ಯಾಧ್ಯರಾದ ಸೈಯದ್ ಸಲಾಮ್ ಅವರ ಮಹತ್ವಾಕಾಂಕ್ಷೆಯ ಕನಸು ಇಂದು ನನಸಾಗಿದೆ,ತಮ್ಮ ತಂದೆತಾಯಿಗಳ ಹೆಸರಿನಲ್ಲಿ ಸ್ಥಳವನ್ನು ದಾನ ನೀಡಿ ಹಾಗೂ ಸ್ವಂತಹಣವನ್ನು ವಿನಿಯೋಗಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸೈಯದ್ ಸಲಾಂ ಕುಟುಂಬಕ್ಕೆ ಭಗವಂತನು ಹೆಚ್ಚಿನ ಶಕ್ತಿ ಹಾಗೂ ಸೌಭಾಗ್ಯವನ್ನು ನೀಡಲಿ ಎಂದರು.
ಬೆಂಗಳೂರು ಆಗ್ನೇಯ ವಲಯ ಡಿಸಿಪಿ ಪೊಲೀಸ್ ಅಧಿಕಾರಿ ಸಾರಪಾತೀಮಾ ಅವರು ಮಾತನಾಡುತ್ತ ಖಾಸಗಿ ಹೈಟೆಕ್ ಶಾಲೆಗಳ ಭರಾಟೆಯಲ್ಲಿ ಇಂತಹ ಸುಸಜ್ಜಿತ ಗುಣಮಟ್ಟದ ಉರ್ದು ಶಾಲೆಯನ್ನು ನಿರ್ಮಿಸಿ,ಲಕ್ಷಾಂತರ ಮುಸ್ಲಿಂ ವಿದ್ಯಾರ್ಥಿಗಳಿಗೆ ಬೆಳಕಾಗಿರುವ ಸೈಯದ್ ಸಲಾಂ ಅವರ ಕುಟುಗಳು ನಮ್ಮ ಸಮಾಜಕ್ಕೆ ಮಾದರಿಯಾಗಿವೆ, ನಮ್ಮಸಮುದಾಯದ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಚನ್ನಾಗಿ ಓದಿ ಮುಖ್ಯವಾಹಿನಿಗೆ ಬರಬೇಕು ಎಂಬುದಾಗಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ನಿರ್ಮಾತೃ ಹಾಗೂ ಸಮಾಜ ಸೇವಕ ಸೈಯದ್ ಸಲಾಮ್ ಮಾತನಾಡುತ್ತ ನಮ್ಮ ಕುಟುಂಬದ ಅಳಿಲು ಸೇವೆ ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಸಮರ್ಪಣೆ ಎಂದರು.ಇದೇ ವೇಳೆ ಶಿಕ್ಷಕರು ಸೈಯದ್ ಸಲಾಮ್, ಸೈಯದ್ ಸರ್ದಾರ್ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಲೋಕಾಯುಕ್ತ ಇಲಾಖೆಯ ಡಿವೈಎಸ್ ಪಿ.ಎಲ್.ವೈ.ರಾಜೇಶ್, ಸೈಯದ್ ಸಲಾಮ್, ಸೈಯದ್ ಸರ್ದಾರ್ ಹಾಗೂ ಕುಟುಂಬಸ್ಥರು ಹಾಗೂ ಮದೀನ ನಗರದ ಮುಸಲ್ಮಾನ ಮುಖಂಡರು ಹಾಜರಿದ್ದರು.