ಬೆಂಗಳೂರಿನ ಮಲ್ಲೇಶ್ವರದ ಸೇವಾಸದನದಲ್ಲಿ ಸಂಕಲ್ಪ – ನೃತ್ಯ ನಿರಂತರ ಆಯೋಜಿಸಿದ್ದ ಭರತನಾಟ್ಯ ನೃತ್ಯ ಕಾರ್ಯಕ್ರಮವು ಕೇವಲ ನೃತ್ಯದ ಪ್ರದರ್ಶನವಷ್ಟೇ ಅಲ್ಲ, ಅದೊಂದು ಪುರಾತನ ಕಲೆಯನ್ನು ಸಂಭ್ರಮಿಸುವ, ಪರಂಪರೆಯನ್ನು ಬೆಳೆಸುವ ಹಾಗೂ ಕ್ರಿಯಾಶೀಲತೆಯ ಉತ್ತುಂಗದ ಸಮ್ಮಿಲನವಾಗಿತ್ತು. ಮಲ್ಲೇಶ್ವರದ ಕಾಡು ಮಲ್ಲೇಶ್ವರ ಸ್ವಾಮಿಯ ದೇವಸ್ಥಾನದ ಹತ್ತಿರದಲ್ಲೇ ನಡೆದ ಈ ಕಾರ್ಯಕ್ರಮ, ನಟರಾಜನ ನಾಟ್ಯಕಲೆ ಭೂಮಿಗೆ ಬಂದಿಳಿದ ಅನುಭವವನ್ನು ನೀಡಿತು.
ಸಂಕಲ್ಪ ಸಂಸ್ಥೆ ಸತತವಾಗಿ ನೃತ್ಯಾಕಾಂಕ್ಷಿಗಳನ್ನು ಬೆಳೆಸುವಲ್ಲಿ ಹಾಗೂ ಅತ್ತ್ಯುತ್ತಮ ನೃತ್ಯಪಟುಗಳಿಗೆ ನಿರಂತರವಾಗಿ ವೇದಿಕೆಯನ್ನು ನೀಡುತ್ತಾ ಬಂದಿದೆ. ಕಲಾಮೃತ 2025 ಕೂಡ ಈ ಕಾರ್ಯಕ್ರಮಗಳಲ್ಲಿ ಒಂದು. ಫೆಬ್ರವರಿ ಏಳರ ಸಂಜೆ ಮಲ್ಲೇಶ್ವರದ ಸೇವಾಸದನ ಹಾಗೂ ಅಲ್ಲಿನ ಕಿಕ್ಕಿರಿದ ಸಭಾಂಗಣ ಒಂದು ಅತ್ಯದ್ಭುತ ನೃತ್ಯಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು.
ಹೊಳೆಯುವ ರೇಷ್ಮೆ ವಸ್ತ್ರದಲ್ಲಿ ನೃತ್ಯ ಗಾರ್ತಿಯರು ಸಂಗೀತದ ನಾದಕ್ಕೆ ತಾಳ ಹಾಕುತ್ತಾ, ಪ್ರೇಕ್ಷಕರನ್ನು ಕಲೆಯ ಪರಿಪೂರ್ಣ ಲೋಕಕ್ಕೆ ಕೊಂಡೊಯ್ದರು. ವೈಷ್ಣವಿ ತಂಡದಿಂದ `ಶ್ರೀರಾಮ ವೈಭವ” ಎಂಬ ಸೃತ್ಯರೂಪಕವನ್ನು ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ “ಜಗದಾನಂದಕಾರಕ”ವನ್ನು ಬಳಸಿ ಪ್ರಸ್ತುತ ಪಡಿಸಲಾಯಿತು.
ರಾಮನ ಬಗ್ಗೆ ಕೃತಿ, ಗಾಯನ ಮತ್ತು ಅತ್ಯುತ್ತಮ ನೃತ್ಯ ಸೇರಿದರೆ ಅದು ಆನಂದಕಾರಕವಲ್ಲದೆ ಮತ್ತೇನು’ ಈ ರೂಪಕದಲ್ಲಿ ತಂಡವು ಶ್ರೀರಾಮನ ಜನ್ಮದಿಂದ ಹಿಡಿದು, ವನವಾಸ, ಸೀತಾಪಹರಣ, ಹನುಮನ ಮಿಲನ, ಚೂಡಾಮಣಿ ಪ್ರಕರಣ, ರಾಮರಾವಣರ ಯುದ್ಧ ಹಾಗೂ ಶ್ರೀರಾಮ ಪಟ್ಟಾಭಿಷೇಕದವರೆಗಿನ ಕತೆಯನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಕುಮಾರವ್ಯಾಸ ತನ್ನ ಪ್ರಸಿದ್ಧ ಕರ್ಣಾಟ ಭಾರತ ಕಥಾ ಮಂಜರಿಯಲ್ಲಿ, ನಾಂದಿ ಪದ್ಯದಲ್ಲಿ, “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ”, ಎಂದು ಹೇಳುತ್ತಾ, ಎಷ್ಟೊಂದು ಕವಿಗಳು ರಾಮಾಯಣ ಬರೆದಿದ್ದಾರೆಂದರೆ, ಭೂಮಿಯನ್ನು ಹೊತ್ತ ಶೇಷದೇವರು ಕೂಡ ಹೆಡೆ ತಿಣುಕಿದರಂತೆ.
ಆದರೂ ರಾಮಾಯಣದ ಕತೆ ಇನ್ನೂ ಕೂಡ ಜನರನ್ನು ಹಿಡಿದಿಟ್ಟಿದೆ ಹಾಗೂ ಅದರ ನೃತ್ಯ ಪ್ರದರ್ಶನವನ್ನು ನೀಡಿದರೆ ಭಾವುಕರಾಗುತ್ತಾರೆ ಎಂಬುದಕ್ಕೆ ವೈಷ್ಣವಿ ತಂಡದ ಪ್ರದರ್ಶನವೇ ಸಾಕ್ಷಿ. ಪ್ರತಿಯೊಬ್ಬ ನೃತ್ಯಪಟುವಿನ ಅತೀ ಚಿಕ್ಕ ಭಾವಪ್ರದರ್ಶನ ಕೂಡ ಅತ್ಯುತ್ತಮವಾಗಿ ಮೂಡಿಬಂದಿತ್ತು.ಕಥಾಂತರವಾಗುವಾಗ ನೃತ್ಯಗಾರರ ಬದಲಾವಣೆ ಕೂಡ ಹೊಸತನದಿಂದ ಕೂಡಿತ್ತು. ಎಲ್ಲೂ ಕೂಡ ಕತೆ ತುಂಡರಿಸಿದಂತೆ ಕಾಣಲಿಲ್ಲ. ಶ್ರೀರಾಮ ವಿವಾಹ, ಕೈಕಯಿಯ ವರ, ಮಂಥರೆ, ರಾಮ ಕಾಡಿಗೆ ಹೋದದ್ದು ಇತ್ಯಾದಿಯನ್ನು ವೇದಿಕೆಯ ಸಮರ್ಥ ಬಳಕೆಯಿಂದ ನೃತ್ಯಗಾರರು ಅಭಿನಯಿಸಿ ತೋರಿಸಿದರು. ಸರಿಯಾಗಿ ನೋಡಿದರೆ, ತಿಳಿದರೆ ಮತ್ತು ಭಾವವನ್ನು ಅರ್ಥೈಸಿಕೊಂಡರೆ ರಾಮಾಯಣದಲ್ಲಿ ಕೂಡ ಬೇಕಾದಷ್ಟು ಕತೆ, ಭಾವಸೂಕ್ಷ್ಮತೆ, ರೋಚಕತೆ ಇವೆ. ಅದನ್ನು ಸಮರ್ಥವಾಗಿ ತೋರಿಸುವವರು ಬೇಕಷ್ಟೇ.
ರಾಮಾಯಣದ ಈ ರೂಪಕವನ್ನು ಪ್ರಸ್ತುತಪಡಿಸಿದವರ ನೃತ್ಯಗುರು ಶ್ರೀ ಮಿಥುನ್ ಶ್ಯಾಮ್ ಅವರು.ರಾಮಾಯಣದ ಮಂಗಳಕತೆಯೊಂದಿಗೆ ಆರಂಭವಾದ ನೃತ್ಯಸಂಜೆಯ ಮುಂದುವರಿದ ಭಾಗದಲ್ಲಿ ಸಂಕಲ್ಪ ತಂಡದಿಂದ “ಅಂತಃಕರಣ” ಎಂಬ ಪ್ರಯೋಗ ನಡೆಯಿತು. ಮಾನವನ ಒಳಮನಸ್ಸಿನ ಪದರಗಳನ್ನು ಇಲ್ಲಿ ತೆರೆಗೆ ತರಲಾಯಿತು. ಇದರ ತರುವಾಯ, ಪಂಡಿತ ಪಂಡರಿನಾಥಾಚಾರ್ಯ ಗಲಗಲಿಯವರ “ಅಲಕ್ ನಿರಂಜನ” ಹಾಡಿಗೆ ಸಂಕಲ್ಪ ತಂಡ ಅಣಿಯಾಯಿತು.
ನೃತ್ಯಗುರು ಡಾ. ವಿದ್ಯಾ ಲಕ್ಷ್ಮಿಯವರ ನಾಯಕತ್ವದಿಂದ ಈ ಹಾಡಿನ ಮೆರುಗು ಹೆಚ್ಚಿತು. ಸನ್ಯಾಸಿಯ ಭಾವ, ಷೋಡಶಿಯ ಮನದ ದುಗುಡಗಳನ್ನು ತಂಡ ಸಮರ್ಥವಾಗಿ ನಿಭಾಯಿಸಿ, ತಮ್ಮ ನೃತ್ಯ ಪಾಂಡಿತ್ಯವನ್ನು ಮೆರೆಯಿತು. ಭಾವಾಭಿವ್ಯಕ್ತಿಗೊಳಿಸುವುದು ಸುಲಭವಲ್ಲ. ಅದರಲ್ಲೂ ಪ್ರೇಮದ ನಿವೇದನೆ, ಸನ್ಯಾಸಿಯ ಅಚಲ ನಿರ್ಧಾರ ಇತ್ಯಾದಿಗಳನ್ನು ತೆರೆಯ ಮೇಲೆ ಅಭಿವ್ಯಕ್ತಿಗೊಳಿಸಿ, ಪ್ರೇಕ್ಷಕರನ್ನು ಕೂಡ ಅದೇ ಭಾವದಲ್ಲಿ ತೇಲಿ, ಮುಳುಗಿಸಿ ಕರೆದೊಯ್ಯುವುದು ಸಮರ್ಥ ಪಟುಗಳಿಂದ ಮಾತ್ರ ಸಾಧ್ಯ!
ಇದರ ಮುಂದಿನ ಪ್ರಸ್ತುತಿ ಶಿಜಿತ್ ನಂಬಿಯಾರ್ ಹಾಗೂ ಪಾರ್ವತಿ ಮೆನನ್ ದಂಪತಿಗಳದ್ದು. ಶಿಜಿತ್ ನಂಬಿಯಾರ್ ಚೆನ್ನೈಯ ಕಲಾಕ್ಷೇತ್ರದಲ್ಲಿ ಶಿಕ್ಷಕರಾಗಿದ್ದವರು. ನೃತ್ಯದ ಜೊತೆಗೆ ಪಕ್ಕವಾದ್ಯದಲ್ಲಿ ಕೂಡ ತರಬೇತುಗೊಂಡವರು. ಭರತನಾಟ್ಯದಲ್ಲಿ ನಟ್ಟುವನರ್ ಆಗಿ ಗುರುತಿಸಿಕೊಂಡ ಇವರು ತನ್ನ ಸೂಕ್ಷ್ಮತಾಳಜ್ಞಾನಕ್ಕಾಗಿ ಹೆಸರುವಾಸಿ. ಪಾರ್ವತಿ ಮೆನನ್ ಅವರು ಕಲಾಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದವರು ಹಾಗೂ ಅಲ್ಲಿನ ಬಾನಿ ಪರಂಪರೆಯನ್ನು ಸಮರ್ಥವಾಗಿ ಎತ್ತಿ ಹಿಡಿದವರು. ಭಾವಾಭಿನಯಕ್ಕೆ ಹೆಸರು ಮಾಡಿದವರು.
ದೇಶವಿದೇಶಗಳಲ್ಲಿ ಕಲಾಕ್ಷೇತ್ರದ ತಂಡದೊಂದಿಗೆ ಭಾಗವಹಿಸಿ ಮುಖ್ಯ ನೃತ್ಯಗಾರರಾಗಿ ಗುರುತಿಸಿಕೊಂಡವರು. ಶಿಜಿತ್ ಮತ್ತು ಪಾರ್ವತಿಯವರ ಹೆಚ್ಚುಗಾರಿಕೆ ಏನೆಂದರೆ ಅವರು ಒಟ್ಟಿಗೆ ಭರತನಾಟ್ಯದ ಸೂಕ್ಷತೆಗಳನ್ನು ಅನ್ವೇಷಿಸುತ್ತಾರೆ, ಅದರ ಆಧ್ಯಾತ್ಮಿಕತೆಯನ್ನು ಪೂಜಿಸುತ್ತಾರೆ, ಭರತನಾಟ್ಯದ ಸಂಸ್ಕೃತಿ, ಪರಂಪರೆಗಳನ್ನು ಮುಂದುವರಿಸುತ್ತಾರೆ ಮತ್ತು ಅಂತಿಮವಾಗಿ ಅವರು ನಿಮ್ಮನ್ನು “ಭರತನಾಟ್ಯ”ವನ್ನು ಅನುಭವಿಸಲು ಕರೆದೊಯ್ಯುತ್ತಾರೆ.
ಮೃದಂಗದ ಒಂದೊಂದು ಬಡಿತಕ್ಕೂ ಶಿಜಿತ್ ಅವರು ಕೊಡುತ್ತಿದ್ದ ಭಾವಾಭಿವ್ಯಕ್ತಿ ಅತ್ಯಂತ ಉತ್ಕೃಷ್ಟವಾಗಿತ್ತು. ಇವರ ಪ್ರಸ್ತುತಿಯ ನಂತರ ಸಭಿಕರೆಲ್ಲ ಎದ್ದು ನಿಂತು ಪ್ರಚಂಡ ಕರತಾಡನದೊಂದಿಗೆ ಹರ್ಷ ವ್ಯಕ್ತಪಡಿಸಿದ್ದು ಇವರ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿತ್ತು. ಕಾರ್ಯಕ್ರಮದ ಕಡೆಯಲ್ಲಿ ಅನನ್ಯ ಫೌಂಡೇಶನ್ ಸಂಸ್ಥೆಯ ಶ್ರೀ ರಾಘವೇಂದ್ರ ಅವರು ಎಲ್ಲರನ್ನು ವೇದಿಕೆಯಲ್ಲಿ ಸನ್ಮಾನಿಸಿದರು. ಬೆಂಗಳೂರಿನ ಇತರೆಡೆ ಅಥವಾ ದೇಶದ/ವಿದೇಶದ ಇತರೆಡೆಗಳಲ್ಲಿ ಈ ತಂಡದ ಹಾಗೂ ಸಂಕಲ್ಪ ಟ್ರಸ್ಟ್ ಅವರ ಕಾರ್ಯಕ್ರಮಗಳಿದ್ದರೆ ನೀವು ಖಂಡಿತಾ ಹೋಗುವಿರಲ್ಲವೇ?.