ರಾಮನಗರ: ನಗರ ವ್ಯಾಪ್ತಿಯ 31 ವಾರ್ಡ್ಗಳಿಗೆ 24*7 ಕುಡಿಯುವ ನೀರಿನ ಪೂರೈಕೆ ಯೋಜನೆ ಅನುಷ್ಠಾನ ನನಗೆ ತೃಪ್ತಿ ತಂದಿಲ್ಲ, ಕಾಮಗಾರಿಯ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯುವುದಾಗಿ ಶಾಸಕ ಹೆಚ್.ಎ.ಇಕ್ಬಾಲ್ಹುಸೇನ್ ಹೇಳಿದರು.ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಗೊಲ್ಲರಚನ್ನಯ್ಯನದೊಡ್ಡಿ ಗ್ರಾಮದಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ನಗರದಲ್ಲಿ ನೆಟ್ಕಲ್ ಯೋಜನೆ ಕೆಲಸ ಮಾಡುವಾಗ ಸಮರ್ಪಕವಾಗಿ ನೀರು ಪೂರೈಕೆ ಕಾಮಗಾರಿ ಅನುಷ್ಠಾನ ಮಾಡಿಲ್ಲ. ಇವೆಲ್ಲವುಗಳ ಜೊತೆಗೆ ಚೇಂಬರ್ ಅಳವಡಿಕೆ ಸಮರ್ಪಕವಾಗಿಲ್ಲ, ಮನೆಗಳಿಗೆ ಅಳವಡಿಸುತ್ತಿರುವ ಕಳಪೆ ಮೀಟರ್ ಮತ್ತು ನಲ್ಲಿ ಅಳವಡಿಕೆ, ಕೆಲವೆಡೆ ಕಳಪೆ ಪೈಪುಗಳನ್ನು ಸಹ ಅಳವಡಿಸಿರುವುದು ನನ್ನ ಗಮನಕ್ಕಿದೆ. ಆಗಾಗಿ ಇಡೀ ಕಾಮಗಾರಿಯ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದರು.
ಕೆಲಸ ನಿರ್ವಹಿಸುವಾಗ ಬಗೆದಿರುವ ರೋಡ್ ರೆಸ್ಟೋರೇಷನ್ ಒಂದು ಅಡಿಯೂ ಮಾಡಿಲ್ಲ. ಇದಕ್ಕಾಗಿ 12 ಕೋಟಿ ರೂ ಹಣ ಬಂದಿದೆ. ಆದರೆ ಅಧಿಕಾರಿಗಳು 6.5 ಕೋಟಿ ರೂ ರೆಸ್ಟೋರೇಷನ್ಗೆ ಖರ್ಚು ಆಗಿದೆ ಎಂದು ಸಂಬಂಧಪಟ್ಟ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳು ಸ್ಪಷ್ಟೀಕರಣ ಕೊಡುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ರಸ್ತೆಯಲ್ಲಿ ಸರಿಯಾದ ರೆಸ್ಟೋರೇಷನ್ ಮಾಡಿಲ್ಲ, ಕೆಲವೆಡೆ ಮಾತ್ರ ಬಗೆದಿರುವ ರಸ್ತೆಗಳಲ್ಲಿ ಸಿಲ್ಟ್ ಹಾಕಿ ಮುಚ್ಚಿದ್ದಾರೆ. ಇದಕ್ಕೆ 25 ಲಕ್ಷ ಸಹ ವೆಚ್ಚ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆಗಾಗಿ ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಪತ್ರ ಬರೆಯಲಾಗುವುದು ಎಂದರು.
ನೀರು ಪೂರೈಸಲು ಜೋನ್ಗಳನ್ನಾಗಿ ಮಾಡಿಕೊಂಡು ಕೆಲಸ ನಡೆಯುತ್ತಿದೆ. ಆದರೆ ಕೆಲವು ದೋಷಗಳು ಕಂಡು ಬಂದಿದ್ದು, ಎಲ್ಲ ವಾರ್ಡಿಗೆ ನೀರು ಸುಗಮವಾಗಿ ಹರಿದು ಹೋಗವಂತಾಗಬೇಕು. ಮನೆಗಳಿಗೆ ಮೀಟರ್ ಅಳವಡಿಕೆ, ನೀರು ಸೋರುವಿಕೆ ಪರಿಶೀಲನೆ ಮಾಡಬೇಕು. ಜೊತೆಗೆ ಹೊಸ ಲೇ-ಔಟ್ಗಳಿಗೂ ಸಹ ನೀರು ಕಲ್ಪಿಸಬೇಕಿದೆ. ಎಲ್ಲ ಮನೆಗಳಿಗೆ ನಲ್ಲಿಗಳ ಸಂಪರ್ಕ ಕಲ್ಪಿಸಬೇಕಿದೆ. ಇವೆಲ್ಲ ಕೆಲಸಗಳು ಗುಣಮಟ್ಟದಿಂದ ನಡೆದಾಗ ಮಾತ್ರ ಯೋಜನೆ ಸಾರ್ಥಕವಾಗಲಿದೆ ಎಂದರು.
ಈ ಸಮಯದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್ಗೌಡ, ಉಪಾಧ್ಯಕ್ಷೆ ಸೌಭಾಗ್ಯ, ಮಾಜಿ ಅಧ್ಯಕ್ಷರಾದ ಪಾಪಣ್ಣ, ಸದಸ್ಯರಾದ ಪ್ರಭಣ್ಣ, ಕೆಂಚೇಗೌಡ, ಶಿವಲಿಂಗ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ತಿಮ್ಮಯ್ಯ, ಹರೀಸಂದ್ರ ಗ್ರಾಪಂ ಉಪಾಧ್ಯಕ್ಷ ವೀರಭದ್ರಸ್ವಾಮಿ ಮುಖಂಡರಾದ ರವಿ, ಬಿಳಗುಂಬರಾಜೇಂದ್ರ, ವೆಂಕಟೇಶ್, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಪಕ್ಷದ ಮುಖಂಡರು ಇದ್ದರು.