ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ಬಳಿ 52 ವರ್ಷದ ಮಹಿಳೆಯೊಬ್ಬರನ್ನು ಕೊಂದು ಹಾಕಿದ ಒಂದು ವಾರದ ಬಳಿಕ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಅರಣ್ಯ ಇಲಾಖೆ ಎರಡು ಚಿರತೆಗಳನ್ನು ಸೆರೆ ಹಿಡಿದಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಏಳು ವರ್ಷದ ಗಂಡು ಚಿರತೆ, ಮಂಗಳವಾರ ಅದೇ ಪ್ರದೇಶದಲ್ಲಿ ಒಂಬತ್ತು ವರ್ಷದ ಹೆಣ್ಣು ಚಿರತೆ ಸೆರೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಚಿರತೆಗಳ ರಕ್ತ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೆರೆಹಿಡಿಯಲಾದ ಚಿರತೆಗಳಲ್ಲಿ ಯಾವುದಾದರೂ ಒಂದು ಚಿರತೆ ಮಹಿಳೆ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದ್ದು, ಅದನ್ನು ಡಿಎನ್ಎ ಪರೀಕ್ಷೆ ಮೂಲಕ ನಿರ್ಧರಿಸಲಾಗುವುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತ ಮಹಿಳೆಯನ್ನು ಕರಿಯಮ್ಮ ಎಂದು ಗುರುತಿಸಲಾಗಿದ್ದು, ನವೆಂಬರ್ 17 ರಂದು ತನ್ನ ಮನೆಯ ಸಮೀಪದ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು.
ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಳ್ಳಿಯಲ್ಲಿ ನಡೆದ ಈ ಘಟನೆ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಸುತ್ತಮುತ್ತಲ ಗ್ರಾಮಸ್ಥರು ಹೊಲ-ಗದ್ದೆಗಳಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಘಟನೆಯ ನಂತರ ಅರಣ್ಯ ಇಲಾಖೆಯು ಚಿರತೆಗಳ ಜಾಡು ಹಿಡಿಯಲು ಜಾಗದ ಸುತ್ತಲೂ ಎಂಟು ಜೋಡಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿದ್ದು, ದೊಡ್ಡ ಬೋನುಗಳನ್ನು ಇರಿಸಿ, ಕಳೆದೊಂದು ವಾರದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಬೆಟ್ಟದ ತಪ್ಪಲಲ್ಲಿರುವ ಮುದ್ವೀಶ್ವರ ದೇವಾಲಯದ ಬಳಿ ಇಟ್ಟಿದ್ದ ದೊಡ್ಡ ಬೋನಿಗೆ ಚಿರತೆ ಬಿದ್ದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.