ಬೆಂಗಳೂರು:ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಹಲವು ದಶಕಗಳಿಂದ ರಾಜ್ಯದ ನೈಸರ್ಗಿಕ ಸಂಪತ್ತುಗಳನ್ನು ಲೂಟಿ ಮಾಡಿ ಸಾವಿರಾರು ಕೋಟಿ ರೂಗಳನ್ನು ನಷ್ಟ ಮಾಡಿರುವ ಲೂಟಿಕೋರರಿಗೆ ಸರ್ಕಾರ ಓಟಿ ಎಸ್ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಪರ ನಿಂತಿದೆಯೇ, ಯಾವುದೇ ಕಾರಣಕ್ಕೂ ಈ ಅನಿಷ್ಠ ನೀತಿಗಳನ್ನು ಜಾರಿಗೊಳಿಸದಿರಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ” ಅಕ್ರಮ ಗಣಿಗಾರಿಕೆಗಳು ಕರ್ನಾಟಕ ರಾಜ್ಯದಲ್ಲಿ ಹಲವು ದಶಕಗಳಿಂದ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವುದು ರಾಜ್ಯದ ಪ್ರತಿಷ್ಠೆಗೆ ಕಪ್ಪು ಮಸಿ ಬಳಿಯುವ ರೀತಿಯಲ್ಲಿ ಇರುವುದು ಖಂಡಿತ ಸತ್ಯ. ಈಗಾಗಲೇ ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ನೂರಾರು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
ಜನಾರ್ಧನರೆಡ್ಡಿ, ಸತೀಶ್ ಸೈಲ್ ಸೇರಿದಂತೆ ಅನೇಕ ರಾಜಕಾರಣದಲ್ಲಿನ ಕುಳಗಳು ಜೈಲು ಪಾಲಾಗಿದ್ದಿದು ನಮ್ಮ ಕಣ್ಮುಂದೆ ಇದೆ. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗಳ ಬಹುಪಾಲು ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರಿಗೆ ಸೇರಿದ್ದದೆ ಆಗಿದೆ. ರಾಜ್ಯವನ್ನಾ ಳಿರುವ ಮೂರು ಪಕ್ಷಗಳ ಸರ್ಕಾರಗಳು ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಲು ಎಳ್ಳಷ್ಟು ಮನಸ್ಸು ಮಾಡದೆ ಸಂಪೂರ್ಣ ಅಕ್ರಮ ಗಣಿಗಾರಿಕೆ ಮಾಲೀಕರುಗಳೊಂದಿಗೆ ಕೈಜೋಡಿಸಿರುವುದು ತಾವು ಇದೀಗ ತಂದಿರುವ ಓಟಿಎಸ್ ನೀತಿಯಿಂದಾಗಿ ಸ್ಪಷ್ಟವಾಗುತ್ತಿದೆ ”
“ರಾಜ್ಯದಲ್ಲಿ ಅನೇಕ ಕಂಪನಿಗಳು ಕ್ರಮಬದ್ಧವಾಗಿ ಗಣಿಗಾರಿಕೆಯನ್ನು ನಡೆಸಿಕೊಂಡು ರಾಯಧನ ಸೇರಿದಂತೆ ಅನೇಕ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ವರ್ಗಗಳಿಗೆ ಬೆಂಬಲ, ಉತ್ತೇಜನ ನೀಡುವ ಬದಲು ತಮ್ಮ ಈ ಓಟಿಎಸ್ ನೀತಿ ಅಕ್ರಮ ಗಣಿಗಾರಿಕೆಗಳಿಗೆ ಮತ್ತಷ್ಟು ಇಂಬು ನೀಡುವಂತಿದೆ ” ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಕಿಡಿ ಕಾರಿದ್ದಾರೆ.
“ಅಕ್ರಮ ಗಣಿಗಾರಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಂಡು, ಅವರುಗಳ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವ ಮೂಲಕ ರಾಯಧನ ಹಾಗೂ ಇನ್ನಿತರ ದಂಡ ಮೊತ್ತವನ್ನು ವಸೂಲಿ ಮಾಡಿದರೆ ನಿಜಕ್ಕೂ ರಾಜ್ಯದಲ್ಲಿ ಆರ್ಥಿಕ ಕ್ರೂಡಿಕರಣಕ್ಕೆ ಅರ್ಥ ಬರುತ್ತದೆ. ಅದನ್ನು ಬಿಟ್ಟು ಅಕ್ರಮ ಗಣಿಗಾರಿಕೆಗೆ ಮತ್ತಷ್ಟು ಅವಕಾಶ ನೀಡುವ ರೀತಿಯಲ್ಲಿ ಈ ರೀತಿಯ ಅನಿಷ್ಠ ಓಟಿಎಸ್ ಪದ್ದತಿಯನ್ನು ಜಾರಿಗೆ ತಂದಲ್ಲಿ ರಾಜ್ಯವು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ” ಎಂದು ತಮ್ಮ ಪತ್ರದಲ್ಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
“ರಾಜ್ಯದಲ್ಲಿನ ನೈಸರ್ಗಿಕ ಸಂಪತ್ತುಗಳನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಉಳಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾವು ಈ ಕೂಡಲೇ ತಮ್ಮ ಈ ತಪ್ಪು ನೀತಿಯನ್ನು ಸರಿಪಡಿಸಿಕೊಂಡು ಈ ಅನಿಷ್ಟ ಓಟಿಎಸ್ ನೀತಿಯನ್ನು ರದ್ದುಗೊಳಿಸಬೇಕೆಂದು'” ಆಗ್ರಹಿಸಿದ್ದಾರೆ.