ಬೆಂಗಳೂರು: ಭಾರತೀಯ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಸಂಗ್ರಹಕಾರ (ಟಿ.ಸಿ) ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರುಪಾಯಿ ವಂಚಿಸಿದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಕಲಬುರಗಿ ವಿದ್ಯಾನಗರದ ಲಕ್ಷ್ಮಿಕಾಂತ ಹೊಸಮನಿ (41), ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕುಲಪ್ಪಸಿಂಗೆ, ಉತ್ತರಹಳ್ಳಿಯ ಮುರಳಿ ಎಂದು ಗುರ್ತಿಸಲಾಗಿದೆ.
ವಂಚನೆಗೊಳಗಾದ ಆಲಮೇಲದ ಹುಸೇನಪ್ಪ ಮಾಡ್ಯಾಳ ಸಿಸಿಬಿ ಠಾಣೆಗೆ ದೂರು ನೀಡಿದ್ದು, ಸಿಸಿಬಿ ಇನ್ಸ್ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡ ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಸಮೀಪ ಆರೋಪಿಗಳನ್ನು ಬಂಧಿಸಿದೆ.
ಕಲಬುರಗಿಯ ಲಕ್ಷ್ಮಿಕಾಂತ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಂಪರ್ಕವಿದೆ ಎಂದು ಹೇಳಿಕೊಂಡು ನಿರುದ್ಯೋಗಿಗಳಿಗೆ ವಂಚಿಸಿದ್ದ. ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ತಲಾ ಒಬ್ಬರಿಂದ 20 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದ. ನಕಲಿ ನೇಮಕಾತಿ ಆದೇಶವನ್ನು ಈ ತಂಡ ವಿತರಿಸಿದ್ದಾರೆ. ಬಳಿಕ ಐವರು ಆರೋಪಿಗಳು ರೈಲ್ವೇ ನೌಕರರಂತೆ ನಟಿಸಿ ನಾಸಿಕ್ ಮತ್ತು ಉತ್ತರಪ್ರದೇಶದಲ್ಲಿ ನಕಲಿ ತರಬೇತಿ ನೀಡಿದ್ದಾರೆ. ನಂತರ ಉದ್ಯೋಗ ಸಿಕ್ಕ ಖುಷಿಯಲ್ಲಿ ಮುಂಬೈ ಮತ್ತು ಕಾನ್ಪುರಕ್ಕೆ ವರದಿ ಮಾಡಲು ಹೋದಾಗ ನೇಮಕಾತಿ ನಕಲಿ ಎಂಬುದು ತಿಳಿದುಬಂದಿದೆ. ಬಳಿಕ ಹಣ ವಾಪಸ್ ನೀಡುವಂತೆ ಆರೋಪಿಗಳನ್ನು ಕೇಳಲಾಗಿದ್ದು, ಈ ವೇಳೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಡಿಸೆಂಬರ್ 9 ರಂದು ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳಿದ ಐವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್ಗಳ ಜೊತೆಗೆ ವಂಚನೆ ಪ್ರಕರಣವನ್ನು ಸಿಸಿಬಿ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.