ಥಾಣೆ: ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ 22 ವರ್ಷದ ಕೊಲೆ ಆರೋಪಿಯೊಬ್ಬ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ನಡೆದಿದೆ. ಚಪ್ಪಲಿ ಜಡ್ಜ್ ಗೆ ತಾಕಿಲ್ಲ. ಬದಲಿಗೆ ಅವರ ಮೇಜಿನ ಮುಂಭಾಗದ ಮರದ ಪಟ್ಟಿಗೆ ಹೊಡೆದಿದ್ದು, ಕ್ಲರ್ಕ್ ಬೆಂಚ್ ಕಡೆಯಿಂದ ಕೆಳಗೆ ಬಿದ್ದಿದೆ.
ಕಲ್ಯಾಣ್ ಪಟ್ಟಣದ ಕೋರ್ಟ್ ನಲ್ಲಿ ಈ ಘಟನೆ ನಡೆದಿದೆ.ತದನಂತರ ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಹೀಗೆ ಮಾಡಿದ ಆರೋಪಿಯನ್ನು ಕಿರಣ್ ಸಂತೋಷ್ ಭರಮ್ ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಆತನನ್ನು ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಆರ್. ಜಿ ವಾಗ್ಮರೆ ಅವರ ಮುಂದೆ ಹಾಜರುಪಡಿಸಿದಾಗ ಅವರತ್ತ ಆರೋಪಿ ಚಪ್ಪಲಿ ಎಸೆದಿರುವುದಾಗಿ ಮಹಾತ್ಮ ಪುಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.