ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ನ್ಯೂಯಾರ್ಕ್ ಕನ್ನಡ ಕೂಟ ಸಹಯೋಗದೊಂದಿಗೆ ಮೂರನೇ ವಿಶ್ವ ಕನ್ನಡ ಹಬ್ಬವನ್ನು ಅಮೆರಿಕದ ನ್ಯೂಯಾರ್ಕ್ ನಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದ್ದು; ಇದರ ಪ್ರಯುಕ್ತ ಪ್ರಚಾರ ವಿಡಿಯೋಗೆ ನ್ಯೂಯಾರ್ಕ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ರಘು ರಂಗರಾಜ್ ಚಾಲನೆ ನೀಡಿದರು.
ಈ ಹಿಂದೆ ದುಬೈನಲ್ಲಿ ಮೊದಲ ವಿಶ್ವ ಕನ್ನಡ ಹಬ್ಬವನ್ನು ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರದಲ್ಲಿ ಎರಡನೇ ವಿಶ್ವ ಕನ್ನಡ ಹಬ್ಬವೂ ಅಷ್ಟೇ ಯಶಸ್ವಿಯಾಗಿ ಸಿಂಗಪುರದಲ್ಲಿ ನೆರವೇರಿತು. ಇದೀಗ ಸಾಗರದಾಚೆಯ ನ್ಯೂಯಾರ್ಕ್ ನಲ್ಲಿ ಮೂರನೆ ವಿಶ್ವ ಕನ್ನಡ ಹಬ್ಬಕ್ಕೆ ಭರಪೂರ ಸಿದ್ಧತೆ ನಡೆದಿದೆ.ಈ ವೇಳೆ ಶ್ರೀ ಪ್ರಸಾದ ಗುರೂಜಿಯವರು ಜ್ಯೋತಿ ಬೆಳಗಿ ಶುಭಕೋರಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರಾದ ಟಿ.ಶಿವಕುಮಾರ್ ನಾಗರನವಿಲೆ, ದಿನೇಶ್ ಜೋಶಿ ಅಬಸೆ, ಮೀನಾ ರಾಜ್ ಗೌಡ, ಗೋಸಾಲ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಕಾಸ್ ಹಾಗೂ ಪುಷ್ಪ, ನಿರೂಪಕರಾದ ಸವಿ ಪ್ರಕಾಶ್, ಧನಂಜಯ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಟಿ.ಶಿವಕುಮಾರ್ ಅವರು ಕಳೆದ ಎರಡು ವಿಶ್ವಕನ್ನಡ ಹಬ್ಬಗಳ ಸಾರ್ಥಕತೆಗೆ ಸಹಕರಿಸಿದ; ಹಗಲಿರುಳು ದುಡಿದವರನ್ನು ಸ್ಮರಿಸಿದರು. ಮೂರನೇ ವಿಶ್ವ ಕನ್ನಡ ಹಬ್ಬಕ್ಕೆ ಎಲ್ಲರ ಸಹಕಾರ ಕೋರಿದರು.