ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರಿಗೆ ಕಳುಹಿಸಲಾದ ಪಟ್ಟಿಯಲ್ಲಿ ಕುಸ್ತಿಪಟು ಅಂತಿಮ ಪಂಘಲ್ ಅವರ ತರಬೇತುದಾರರ ಹೆಸರನ್ನು ಕೈಬಿಟ್ಟಿರುವುದಕ್ಕೆ ಭಾರತ ಕುಸ್ತಿ ಫೆಡರೇಷನ್ನ ಅಡ್ಹಾಕ್ ಸಮಿತಿ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ ಅಮಾನತಿನಲ್ಲಿದ್ದಾಗ ಅಡ್ಹಾಕ್ ಸಮಿತಿಯು ಸಂಘಟಕರಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸಿತ್ತು. ಈ ವೇಳೆ ಸಮಿತಿಯು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಪ್ಯಾರಿಸ್ಗೆ ಪಂಘಲ್ ಅವರ ಆದ್ಯತೆಯ ತರಬೇತುದಾರರಿಗೆ ವೀಸಾ ಮಂಜೂರು ವಿಳಂಬವಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಿಸಾರ್ನಲ್ಲಿ ತರಬೇತಿ ಪಡೆಯುತ್ತಿರುವ 19 ವರ್ಷದ ಪಂಘಲ್, 2023ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ ಭಾರತದ ಮೊದಲ ಕುಸ್ತಿಪಟುವಾಗಿದ್ದಾರೆ.