ಗದಗ: ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ವೇಳೆ ಬೆಳಗಾವಿಯಲ್ಲಿ ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸಿ ಗುರುವಾರ ಗದಗದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಪ್ರತಿಭಟನಾಕಾರರು ಟಯರ್ಗೆ ಬೆಂಕಿ ಹಚ್ಚುವಾಗ ಕಾಲಿಗೆ ಬೆಂಕಿ ತಗುಲಿದ ಘಟನೆಯೂ ಸಂಭವಿಸಿತು.
ಪ್ರತಿಭಟನಾಕಾರರು ಗದಗ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲು ಮುಖಂಡರು ಮುಂದಾದರು. ಆಗ, ಟಯರ್ಗೆ ಹೊತ್ತಿದ್ದ ಬೆಂಕಿ ಆರಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಬೆಂಕಿ ಆರಿಸಲು ಮುಂದಾಗುತ್ತಿದ್ದಂತೆ ಪಂಚಮಸಾಲಿ ಮುಖಂಡರು ಅಡ್ಡಿಪಡಿಸಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದ, ತಳ್ಳಾಟ ನಡೆಸಿದ್ದಾರೆ. ಟಯರ್ ದೂಡುವ ವೇಳೆ ಕಾಲಿಗೆ ಬೆಂಕಿಹೊತ್ತಿ ಕೆಲ ಕಾಲ ಪರದಾಟಪಡುವಂತಾಯಿತು. ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು.