ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಅನೇಕ ಪಂಚಮಸಾಲಿ ಮುಖಂಡರು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು.
ಸಭೆಯಲ್ಲಿ ಪಂಚಮಸಾಲಿ ವಕೀಲ ಘಟಕದ ಮುಖಂಡ ಆರ್.ಪಿ.ಪಾಟೀಲ್ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುತ್ತಿಗೆ ತಡೆಯಲು ವಾಹನ ನಿರ್ಬಂಧ ವಿಧಿಸಿದ್ದೇಕೆ? ನಾವು ಹೋರಾಟ ಹೇಗೆ ಮಾಡುವುದು? ದೂರದ ಊರುಗಳಿಂದ ಜನರು ಬರುವುದು ಹೇಗೆ? ನಾವು ಸಂಧಾನ ಸಭೆಯಿಂದ ಹೊರಗೆ ಹೋಗುತ್ತೇವೆ. ಕಾನೂನು ಸುವ್ಯವಸ್ಥೆ ನೆಪವೊಡ್ಡುವುದು ಸರಿಯಲ್ಲ ಎಂದು ಏರು ಧ್ವನಿಯಲ್ಲಿ ಸಂಧಾನಕ್ಕೆ ಬಂದಿದ್ದ ಜಿಲ್ಲಾಧಿಕಾರಿ, ಎಸ್ಪಿ ಮತ್ತು ನಗರ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಇತ್ತ ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಡಿಸೆಂಬರ್ 10 ರಂದು ಟ್ರ್ಯಾಕ್ಟರ್ ಮೂಲಕ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಕರೆ ಕೊಟ್ಟಿದ್ದರು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರಣ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ಉದ್ದೇಶದಿಂದ ಟ್ಯಾಕ್ಟರ್, ಕ್ರೂಜರ್ ಹಾಗೂ ಇತರೆ ವಾಹನಗಳು ಬೆಳಗಾವಿ ನಗರಕ್ಕೆ ಬಾರದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿಯಲ್ಲಿನ ಲಿಂಗಾಯತ ಪಂಚಮಸಾಲಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. “ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಪೊಲೀಸರ ಮೂಲಕ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ” ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಸದನ ಒಳಗೂ ಮತ್ತು ಹೊರಗೂ ಯತ್ನಾಳ ಗುಡುಗು
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ನಮ್ಮ ಜೊತೆ ಚರ್ಚೆ ಮಾಡುವುದನ್ನು ಬಿಟ್ಟು ಪೊಲೀಸರ ಮೂಲಕ ಟ್ರ್ಯಾಕ್ಟರ್ ತಡೆಯುವ ಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ಮಾಡಿದ್ದರು.
ಪಂಚಮಸಾಲಿ ಹೋರಾಟಕ್ಕೆ ನಿರ್ಬಂಧ ವಿರೋಧಿಸಿ ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಸಿ.ಪಾಟೀಲ್ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಮಂಗಳವಾರ ನಡೆಯುವ ಪಂಚಮಸಾಲಿ ಹೋರಾಟಕ್ಕೆ ಯಾಕೆ ತಡೆ ನೀಡಿದ್ದೀರಿ? ಎಂದು ಸ್ಪೀಕರ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು, ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದನದ ಹೊರಗೆ ಪಂಚಮಸಾಲಿ ಸಮುದಾಯ ಹೋರಾಟ ಮಾಡುತ್ತಿದೆ. ಹೋರಾಟವನ್ನು ಹತ್ತಿಕ್ಕಿ ಅನುಭವ ಮಂಟಪದ ಬಗ್ಗೆ ಮಾತಾಡುತ್ತಿದ್ದೀರಿ ಎಂದು ವಿರೋಧ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು.