ದೇವನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮದಿನ ಆಚರಿಸಿದರು.
ನಂತರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಎಂ ರವಿಕುಮಾರ್ ಮಾತನಾಡಿ ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯದ ಪ್ರವರ್ತಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು ಮತ್ತು ಅಂತ್ಯೋದಯ ದಿನ ಎಲ್ಲರಿಗೂ ಶುಭ ಹಾರೈಸಿದರು ಹಾಗೂ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವತಿಯಿಂದ ಸೆ.17 ರಿಂದ ಅ.2ರ ವರೆಗೆ ಸೇವಾ ಪಾಕ್ಷಿಕವಾಗಿ ಆಚರಿಸಲಾಗುತ್ತಿದೆ ಎಂದರು.
ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ನಿಕಟ ಪೂರ್ವ ಅಧ್ಯಕ್ಷ ಅಂಬರೀಶಗೌಡ ಮಾತನಾಡಿ ಪಂಡಿತ ದಿನದಯಾಳ ಉಪಾಧ್ಯಾಯರವರು ಸಾಮಾನ್ಯರಲ್ಲಿಯೇ ಅಸಾಮಾನ್ಯರಾಗಿ ಹಮ್ಮು-ಬಿಮ್ಮುಗಳಿಗಾಗಿ ಹಪಿಹಪಿಸದ ಸರಳ ಸಜ್ಜನಿಕೆಯ ರಾಷ್ಟ್ರೀಯವಾದಿ ಚಿಂತಕ. ಉಪಾಧ್ಯಾಯರ ಆಲೋಚನೆಗಳು, ಆಧುನಿಕ ಭಾರತದ ನಿರ್ಮಾಣಕ್ಕೂ ಭದ್ರ ಬುನಾದಿಯನ್ನು ಹಾಕಿವೆ.
ಅಭಿವೃದ್ಧಿಯೆಂಬುದು ಕೇವಲ ವರ್ಗೀಕರಣವಲ್ಲ. ಅಲ್ಲದೇ ಆರ್ಥಿಕಾಭಿವೃದ್ಧಿ ಮಾತ್ರ ದೇಶವನ್ನು ಸದೃಡವಾಗಿಸಬಲ್ಲದು ಎಂಬ ಮಾನದಂಡದಿಂದ ಹೊರಬಂದು ದಿನ-ದಲಿತರ ಹಾಗೂ ಹಳ್ಳಿಗಳ ಉದ್ಧಾರವೇ ಅಭಿವೃದ್ಧಿಯೆಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಎಂದರು.ಮೋದಿಯವರು ಮನುಕುಲದ ಸೇವೆ-ಭಗವಂತನ ಸೇವೆ ಎಂದು ಭಾವಿಸಿ ತಮ್ಮ ಆಡಳಿತಾವಧಿಯಲ್ಲಿ ಆನೇಕ ಮಾನವೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸಮಾಜದಲ್ಲಿನ ಪ್ರತಿ ವರ್ಗದ ಸಬಲೀಕರಣ, ರೈತರ ಕಲ್ಯಾಣ ಪ್ರಾಧಾನಿಯವರ ಆದ್ಯತೆಯಾಗಿದೆ.
ಪರಿಶಿಷ್ಟ ಜಾತಿಗಳು, ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಐತಿಹಾಸಿಕ ಕೆಲಸಗಳನ್ನು ಜಾರಿಗೊಳಿಸುತ್ತಿದ್ದಾರೆ. ದೇಶದ ಮತ್ತು ವಿದೇಶದಲ್ಲಿಯೂ ಸಹ ಮೋದಿ ಅವರ ಕಾವ್ಯಗಳಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ .ಸೇವಾ ಪಾಕ್ಷಿಕ ಕಾರ್ಯಕ್ರಮ ಮತ್ತು ಸದಸ್ಯತ್ವ ಅಭಿಯಾನದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಪ್ರತಿ ಬೂತ್ ಮಟ್ಟದಲ್ಲೂ ಪಕ್ಷವನ್ನು ಸಂಘಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದಹಿರಿಯ ಮುಖಂಡರಾದ ದೇಸು ನಾಗರಾಜ್, ವಿಜಯ್ ಕುಮಾರ್,ಸುನೀಲ್, ರವಿ, ನಾಗವೇಣಿ, ಪುನೀತ ಸುರೇಶಾಚಾಯೃ ಸೇರಿದಂತೆ ತಾಲೂಕಿನ ಕಾರ್ಯಕರ್ತರು ಇದ್ದರು.