ಬ್ಯಾಟರ್ ಮತ್ತು ಬೌಲರ್ ಗಳ ಸಾಂಘಿಕ ಆಟದ ಪರಿಣಾಮ ಭಾರತ ತಂಡ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯವನ್ನು 142 ರನ್ ಗಳ ಅಂತರದಿಂದ ಜಯಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಅಹ್ಮದಾಬಾದ್ ನ ನಿಧಾನ ಗತಿಯ ಪಿಚ್ ನಲ್ಲಿ ಫಾರ್ಮ್ ನಲ್ಲಿರುವ ನಾಯಕ ರೋಹಿತ್ ಶರ್ಮಾ ಔಟಾದ ವೇಳೆ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಗಳಿಸಿದ ಶುಭಮನ್ ಗಿಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ಅವರಿಗೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲ್ಲಲು 356 ರನ್ ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ ಭಾರತದ ಬೌಲರ್ ಗಳ ದಾಳಿಯನ್ನು ಎದುರಿಸಲಾಗದೆ 34.2 ಓವರ್ ಗಳಲ್ಲಿ ಕೇವಲ 214 ರನ್ ಗಳಿಗೆ ಆಲೌಟ್ ಆಯಿತು. ದೊಡ್ಡ ಮೊತ್ತದ ಗುರಿ ಪಡೆದಿದ್ದರೂ ಇಂಗ್ಲೆಂಡ್ ತಂಡದ ಒಬ್ಬನೇ ಒಬ್ಬ ಬ್ಯಾಟರ್ ಕೂಡ ಅರ್ಧಶತಕ ಸಹ ಗಳಿಸಲು ಸಫಲವಾಗಲಿಲ್ಲ. ಭಾರತದ ಪರ ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 4 ವಿಕೆಟ್ ಪಡೆದರು. ಉಳಿದೆರಡು ವಿಕೆಟ್ ವಾಶಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪಾಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಈ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಸೋತದ್ದೇ ಹೆಚ್ಚು. ನಿಧಾನ ಗತಿಯ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸುವುದು ಸುಲಭವಿರಲಿಲ್ಲ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ತಂಡವೇ ಇಲ್ಲಿ ಪರಾಭವಗೊಂಡಿದೆ. 2023ರ ಏಕದಿನ ವಿಶ್ವಕಫ್ ಫೈನಲ್ ನಲ್ಲೂ ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಕೈಸುಟ್ಟುಕೊಂಡಿತ್ತು. ಹಾಗಾಗಿ ಭಾರತ ತಂಡ ಬ್ಯಾಟಿಂಗ್ ಗೆ ಇಳಿಸಲ್ಪಟ್ಟಾಗ ಭಾರತಕ್ಕೂ ಅಂತಹದ್ದೊಂದು ಆತಂಕ ಇತ್ತು. ಅದಕ್ಕೆ ಸರಿಯಾಗಿ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನವಾಗಿತ್ತು. ಆದರೆ ಆ ಬಳಿಕ ಉಪನಾಯಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರು 2ನೇ ವಿಕೆಟ್ ಗೆ 116 ರನ್ ಬಾರಿಸುವ ಮೂಲಕ ತಂಡವನ್ನು ಆಧರಿಸಿದರು.