ಕಾರವಾರ: ಹಾಲಕ್ಕಿ ಜನಾಂಗದ ಹಾಡುಗಳ ಮೂಲಕ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕøತರಾದ ಸುಕ್ರಿ ಬೊಮ್ಮಗೌಡ(88) ಅವರು ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದಾಗಿ ಅವರು ಉತ್ತರಕನ್ನಡ ಜಿಲ್ಲೆಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.ಸುಕ್ರಿ ಬೊಮ್ಮಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದ ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರ ಸಾಧನೆಗಳನ್ನು ಸ್ಮರಿಸಿದ್ದಾರೆ.
ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.ಹಾಲಕ್ಕಿ ಜಾನಪದ ಹಾಡುಗಳ ಕೋಗಿಲೆ ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮದ್ಯಪಾನ ವಿರೋಧಿ ಹೋರಾಟ ಸೇರಿ ಅನೇಕ ಜನಪರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದ್ದರು ಎಂದು ಹೇಳಿದ್ದಾರೆ.
ಸುಕ್ರಿಬೊಮ್ಮಗೌಡ ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ್ ಬೊಮ್ಮಾಯಿ, ಭಗವಂತ ಅವರ ಆತ್ಮಕ್ಕೆ ಶಾಂತಿನೀಡಲಿ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಕೋರಿದ್ದಾರೆ.ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಸುಕ್ರಜ್ಜಿ ಶ್ರಮಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಾಧನೆಗಳನ್ನು ನೆನಪಿಸಿಕೊಂಡಿದ್ದಾರೆ.
ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅವರ ನಿಧನಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಕೆ ಗೋಪಾಲಯ್ಯನವರು ತೀವ್ರ ಸಂತಾಪ ಸೂಚಿಸಿದ್ದಾರೆ.ಸುಕ್ರಿ ಬೊಮ್ಮಗೌಡ ಅವರು ಕಾರವಾರ ಜಿಲ್ಲೆಯ “ಹಾಡು ಹಕ್ಕಿ ” ಚಿಕ್ಕಂದಿನಿಂದಲೇ ತಮ್ಮ ತಾಯಿಯ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದವರು, ಇವರು ಹಾಲಕ್ಕಿ ಒಕ್ಕಲಿಗ ಬುಡಕಟ್ಟಿ ನಲ್ಲಿ ಹುಟ್ಟಿ, ಹಾಡುಗಾರಿಕೆಯ ಜೊತೆಗೆ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು.
ಇವರ ಅದ್ಭುತ ಹಾಡುಗಾರಿಕೆಯನ್ನು ಗುರುತಿಸಿದ್ದ ಭಾರತ ಸರ್ಕಾರ, ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ “ಜಾನಪದ ಶ್ರೀ ಪ್ರಶಸ್ತಿ ” ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ, ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿದ್ದವು. ಸುಕ್ರಿ ಬೊಮ್ಮಗೌಡ ರವರು ತಮ್ಮ ಅಪ್ರತಿಮ ಸಾಧನೆಗಳ ಮೂಲಕ ಸಾರ್ಥಕವಾದ ಜೀವನವನ್ನು ನಡೆಸಿದ್ದಾರೆ ಎಂದು ಶಾಸಕರು ತಿಳಿಸಿದರು.ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.