ಸಮನ್ವಯ ಸಾಹಿತಿ ಡಾ. ದೊಡ್ಡರಂಗೇಗೌಡರ ಅಭಿಮಾನಿಗಳ ಬಳಗ ಮತ್ತು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡರ 79 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ, ಚಲನಚಿತ್ರ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಭರಣ ಮಾತನಾಡುತ್ತ ದೊಡ್ಡ ರಂಗೇಗೌಡರೊಂದಿಗಿನ 40 ವರ್ಷಗಳ ತಮ್ಮ ಒಡನಾಟ ತಿಳಿಸಿದರು.ಸಾಹಿತ್ಯ ಕ್ಷೇತ್ರ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ರಾಜಕೀಯ, ಸಾಮಾಜಿಕ ಜೀವನದಲ್ಲಿ ದೊಡ್ಡರಂಗೇಗೌಡರು ಸಮನ್ವಯತೆ ಸಾಧಿಸಿಕೊಂಡ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಕನ್ನಡ ನಾಡು, ನುಡಿ, ಕುರಿತಂತೆ ಸರ್ಕಾರಗಳ ಆಶ್ವಾಸನೆಗಳು, ಹಾಗೂ ಸಮ್ಮೇಳನಗಳ ನಿರ್ಣಯಗಳು ನಿರೀಕ್ಷೆಗಳಾಗಿಯೇ ಉಳಿದು ಬಿಟ್ಟಿದೆ. ಸಂಘ ಸಂಸ್ಥೆಗಳು ಜನ ಸಾಮಾನ್ಯರು ಕನ್ನಡವನ್ನು ಬಳಸುವ, ಬೆಳೆಸುವ,ಕಲಿಸುವ ದೀಕ್ಷೆ ತೆಗೆದುಕೊಳ್ಳುಬೇಕು. ಸೆಲ್ಲಿ ಹುಚ್ಚು, ಭಾವಚಿತ್ರಗಳು, ನಮ್ಮ ಗುರುತನ್ನು ಗುರುತಾಗಿಸುವುದಿಲ್ಲ, ನಮ್ಮ ಶ್ರಮಸಂಸ್ಕೃತಿ, ಬೆವರಿನ ಬದುಕು ಮಾತ್ರ ನಮ್ಮ ಗುರುತು, ಅದಕ್ಕೆ ಸ್ಪಷ್ಟ ಉದಾಹರಣೆ ದೊಡ್ಡ ರಂಗೇಗೌಡರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ, ಕೇಂದ್ರ ಕಾರ್ಯದರ್ಶಿಯಾದ ವ.ಚ.ಚನ್ನೇಗೌಡ ಮಾತನಾಡುತ್ತ, ಸದ್ದಿಲ್ಲದೆ ಬಹುಮುಖ ಪ್ರತಿಭೆಯಲ್ಲಿ ಅರಳಿ ಕೊಂಡ ಆವರಿಸಿಕೊಂಡ, ಸಮನ್ವಯಗೊಂಡ ಸಾಹಿತಿ ದೊರಂಗೌ ಎಂದರು.ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತು , ಕೇಂದ್ರದ ಅಧ್ಯಕ್ಷರಾದ ನಾಡೋಜ ಮನುಬಳಿಗಾರ್ ಮಾತನಾಡುತ್ತ ವಿಧಾನ ಸೌಧದ ಬಳಿ ಕನ್ನಡ ಭುವನೇಶ್ವರಿಯ ಪ್ರತಿಷ್ಠಾಪನೆಗೆ ಮೊದಲು ಅಜ್ಞಾಪಿಸಿದವರು ದೊರಂಗೌ. ಶ್ರೀಯುತರಿಗೆ ನಾಡೋಜ ಬರಬೇಕೆಂದು ಅಭಿಮಾನಿಗಳ ಆಶಯ ಎಂದರು.ದೊರಂಗೌ ಅಭಿಮಾನಿಗಳ ಬಳಗ ಅಧ್ಯಕ್ಷ ಉಪೇಂದ್ರ ಕುಮಾರ್ ಎಂ.ಆರ್., ಪ್ರಾಸ್ತಾವಿಕ ನುಡಿದರು.
ಗೋವಿಂದಹಳ್ಳಿ ಕೃಷ್ಣೇಗೌಡ್ರು, ಪ್ರಭಾಕರ ಗಂಗೊಳ್ಳಿ, ಡಾ.ವೆ.ಅಜಿತ್ ಕುಮಾರ್, ವೇದಿಕೆಯಲ್ಲಿದ್ದರು, ಡಾ. ಜಿ. ವೈ ಪದ್ಮ ನಾಗರಾಜ್ ರವರು ಪ್ರಾರ್ಥನೆ ಮತ್ತು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಡಾ.ಗುಣವಂತ ಮಂಜುರವರದ್ದಾಗಿತ್ತು.