ಬೆಂಗಳೂರು: ವಿಧಾನಪರಿಷತ್ ಸದನಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ತನ್ನ ಹಳೆಯ ದ್ವೇಷವನ್ನು ತೀರಿಸಿಕೊಳ್ಳಲು ತೆರೆಮರೆಯಲ್ಲಿ ಸಜ್ಜಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ವೇದಿಕೆಯನ್ನು ಸದ್ದಿಲ್ಲದೇ ಕಾಂಗ್ರೆಸ್ ರೂಪಿಸುತ್ತಿದೆ.
ಸದ್ಯ ವಿಧಾನಪರಿಷತ್ನಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಯ 75 ಮಂದಿಯ ಪೈಕಿ 71 ಮಂದಿ ಸದಸ್ಯರು ಮಾತ್ರ ಸದನದ ಮನೆಯಲ್ಲಿದ್ದಾರೆ. ಬಿಜೆಪಿಯ 29 ಸದಸ್ಯರು, ಜೆಡಿಎಸ್ನ 7 ಸದಸ್ಯರು ಒಟ್ಟು 36 ಸದಸ್ಯರಿದ್ರೆ, ಇತ್ತ ಆಡಳಿತ ಪಕ್ಷ ಕಾಂಗ್ರೆಸ್ನಲ್ಲಿ 34 ಸದಸ್ಯರ ಸಂಖ್ಯಾ ಬಲಾಬಲವಿದೆ. ಸದಸ್ಯರಾಗಿದ್ದ ಕಾಂಗ್ರೆಸ್ನ ಯು.ಬಿ ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್ ಕಾಂಗ್ರೆಸ್ನಲ್ಲಿದ್ದು ಅವಧಿಮುಕ್ತಾಯಗೊಳಿಸಿಕೊಂಡಿದ್ದಾರೆ. ಜೆಡಿಎಸ್ನ ತಿಪ್ಪೇಸ್ವಾಮಿ ಅವರ ಅವಧಿಯ ಪೂರ್ಣಗೊಂಡಿದೆ. ಇನ್ನು ಬಿಜೆಪಿಯಲ್ಲಿದ್ದ ನಾಮನಿರ್ದೇಶಿತ ಸದಸ್ಯ ಸಿ.ಪಿ. ಯೋಗೇಶ್ಚರ್ ಉಪ-ಚುನಾವಣೆಗೆ ಸ್ಫರ್ಧಿಸುವ ನಿಟ್ಟಿನಲ್ಲಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ, 75 ಸದಸ್ಯರ ಪೈಕಿ 71 ಸದಸ್ಯರ ಸಂಖ್ಯಾ ಬಲಾಬಲ ಸದನದಲ್ಲಿದೆ.
ಸರ್ಕಾರ ಈಗ ನಾಲ್ವರು ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅವಕಾಶ ಹೊಂದಿದ್ದು ಆ ನಾಲ್ಕು ಸ್ಥಾನಗಳಲ್ಲಿ ಒಂದನ್ನು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರಿಗೆ ನೀಡುವ ಮೂಲಕ ವಿಧಾನಪರಿಷತ್ನಲ್ಲಿ ಬಹುಮತ ಸಾಧಿಸಲು ವೇದಿಕೆ ಸಿದ್ಧಪಡಿಸಿಕೊಂಡಿದೆ.ಇನ್ನು ರಮೇಶ್ಕುಮಾರ್ ಅವರಿಗೆ ಸದಸ್ಯತ್ವ ನೀಡುವುದು ಮಾತ್ರವಲ್ಲದೇ, ಈ ಹಿಂದೆ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಅಂದು ಪಕ್ಷದ ಆಹ್ವಾನಕ್ಕೆ ಮನ್ನಣೆ ಕೊಡದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಅಲ್ಲಿ ಈಗ ಸದಸ್ಯರಾಗಿ ವಿಧಾನಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರು ಅಂದು ಪಕ್ಷದ ಆಹ್ವಾನಕ್ಕೆ ಮನ್ನಣೆ ಕೊಡದ ಕಾರಣ, ಅವರಿಗೆ ಗೇಟ್ಪಾಸ್ ಕೊಟ್ಟು ಕಟ್ಟಾ ಕಾಂಗ್ರೆಸ್ಸಿಗ ರಮೇಶ್ಕುಮಾರ್ ಅವರನ್ನು ಸಭಾಪತಿ ಸ್ಥಾನಕ್ಕೆ ತಂದು ಕೂರಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ.