ನವದೆಹಲಿ: ಇತ್ತೀಚೆಗೆ ದೆಹಲಿಯ ಹಲವು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆಗಳ ಕುರಿತು ತನಿಖೆ ನಡೆಯುತ್ತಿದ್ದು, ಇದೀಗ ವಿಚಿತ್ರವಾದ ಸಂಗತಿಯೊಂದು ಹೊರಬಿದ್ದಿದೆ. ಪರೀಕ್ಷೆಗೆ ಸಿದ್ಧವಾಗಿಲ್ಲದ ಕಾರಣ ಪರೀಕ್ಷೆಯನ್ನು ಮುಂದೂಡಲೆಂದು ರೋಹಿಣಿ ಜಿಲ್ಲೆಯಲ್ಲಿನ ಕನಿಷ್ಠ ಎರಡು ಶಾಲೆಗಳಿಗೆ ಅದೇ ಶಾಲೆಯ ವಿದ್ಯಾರ್ಥಿಗಳೇ ಬೆದರಿಕೆ ಇಮೇಲ್ ಕಳಿಸಿರುವ ಬಗ್ಗೆ ದೆಹಲಿ ಪೊಲೀಸರ ವಿಶೇಷ ಕೋಶದ ತನಿಖೆಯಲ್ಲಿ ತಿಳಿದುಬಂದಿದೆ.
ಒಂದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎರಡೂ ಶಾಲೆಗಳಿಗೆ ಇಮೇಲ್ಗಳನ್ನು ಕಳುಹಿಸಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇಬ್ಬರೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗದ ಕಾರಣ ಪರೀಕ್ಷೆಯನ್ನು ನಿಲ್ಲಿಸಲೆಂದು ಈ ಇಮೇಲ್ ಕಳುಹಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳಾಗಿರುವುದರಿಂದ ಅವರನ್ನು ಕೌನ್ಸೆಲಿಂಗ್ ಮಾಡಿ ನಂತರ ಬಿಡಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 28 ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿದ ಒಂದು ದಿನದ ನಂತರ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ರೋಹಿಣಿ ಜಿಲ್ಲೆಯಲ್ಲಿರುವ ಮತ್ತೊಂದು ಶಾಲೆಗೂ ಅದೇ ಶಾಲೆಯ ವಿದ್ಯಾರ್ಥಿ ಬೆದರಿಕೆ ಇಮೇಲ್ ಅನ್ನು ಕಳಿಸಿದ್ದಾನೆ. ಇವರಿಬ್ಬರ ಉದ್ದೇಶವು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದೇ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೌನ್ಸೆಲಿಂಗ್ ಸಮಯದಲ್ಲಿ, ಇಬ್ಬರು ವಿದ್ಯಾರ್ಥಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಘಟನೆಯ ಬಗ್ಗೆ ಅವರ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ಶಾಲೆಗಳಿಗೆ ಬಾಂಬ್ ಬೆದರಿಕೆಯೊಡ್ಡಿದ ಘಟನೆಗಳಿಂದ ಪ್ರೇರೇಪಿತರಾಗಿ ಈ ಕೃತ್ಯ ಎಸಗಿದ್ದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಇದಕ್ಕೂ ಮೊದಲು, ಪೊಲೀಸರು ಶಾಲೆಯ ಸಂಪೂರ್ಣ ತಪಾಸಣೆ ನಡೆಸಿ ಬಾಂಬ್ ಬೆದರಿಕೆಯನ್ನು ಸುಳ್ಳು ಎಂದು ಘೋಷಿಸಿದರು.