ಪರ್ತ್: ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸುವುದರೊಂದಿಗೆ ಶೇ.61.11 ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಜತೆಗೆ ಕೆಲ ದಾಖಲೆಗಳನ್ನೂ ತನ್ನ ಹೆಸರಿಗೆ ಬರೆದುಕೊಂಡಿದೆ.ಭಾರತ ತಂಡ 295 ರನ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದು ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ದಾಖಲಿಸಿದ ಅತಿ ದೊಡ್ಡ ಗೆಲುವಾಗಿದೆ.
ಇದಕ್ಕೂ ಮೊದಲು 1977ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಭಾರತ ತಂಡ 222ರನ್ಗಳ ಗೆಲುವು ದಾಖಲಿಸಿದ್ದ ದಾಖಲೆಯಾಗಿತ್ತು. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಭಾರೀ ಅಂತರದ ಅವಿಸ್ಮರಣೀಯ ಗೆಲುವು ದಾಖಲಿಸಿದೆ.ಪರ್ತ್ನ ಐತಿಹಾಸಿಕ ಆಪ್ಟಸ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಮೊದಲ ಪ್ರವಾಸಿ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಆಸ್ಟ್ರೇಲಿಯಾ ತಂಡ ಆಪ್ಟಸ್ ಮೈದಾನದಲ್ಲಿ ಪ್ರವಾಸಿ ತಂಡದೆದುರು ಒಂದೂ ಸೋಲು ಕಂಡಿರಲಿಲ್ಲ. ಇದೀಗ ಜಸ್ಪ್ರಿತ್ ಬುಮ್ರಾ ನೇತೃತ್ವದ ತಂಡ ಆಸ್ಟ್ರೇಲಿಯಾವನ್ನು ಭಾರೀ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ.”ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿರುವುದು ಸಂತೋಷವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆದಾಗ ಒತ್ತಡಕ್ಕೆ ಒಳಗಾಗಿದ್ದೆವು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತವಾಗಿ ಪ್ರತಿಕ್ರಿಯಿಸಿದ್ದೇವೆ.
ಇನ್ನು ಯಶಸ್ವಿ ಜೈಸ್ವಾಲ್ ಆಡಿರುವುದು ಅವರ ಈವರೆಗಿನ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್. ಅವರು ಪರಿಸ್ಥಿತಿಗೆ ತಕ್ಕಂತೆ ಆಡುವ ಮೂಲಕ ತಂಡಕ್ಕೆ ನೆರವಾದರು. ಇನ್ನು ವಿರಾಟ್ ಕೊಹ್ಲಿ ಔಟ್ ಆಫ್ ಫಾರ್ಮ್ನಲ್ಲಿ ಇರುವುದನ್ನು ನಾನು ನೋಡಿಲ್ಲ. ಕಷ್ಟದ ಪಿಚ್ನಲ್ಲಿ ಕೆಲವೊಮ್ಮೆ ಬೇಗೆ ಔಟ್ ಆಗಿರಬಹುದು. ಕೆಲ ಸಂದರ್ಭದಲ್ಲಿ ಅವರ ಫಾರ್ಮ್ನ್ನು ನಿರ್ಣಯಿಸುವುದು ಕಷ್ಟ. ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು” ಎಂದು ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಅಮೋಘ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.