ರಜೌರಿ: ಪಾಕಿಸ್ತಾನ ವಿರುದ್ಧದ ನಾಲ್ಕು ಯುದ್ಧಗಳಲ್ಲಿ ಹೋರಾಡಿದ ಹಿರಿಯ ಯೋಧ ಹವಾಲ್ದಾರ್ (ನಿವೃತ್ತ) ಬಲದೇವ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ತನ್ನ ಹುಟ್ಟೂರಾದ ನೌಶೇರಾದಲ್ಲಿ ವಯೋ ಸಹಜ ಕಾರಣಗಳಿಂದ ಅವರು ನಿಧನರಾಗಿದ್ದು, ಮಂಗಳವಾರದ ನಂತರ ಅವರ ಗ್ರಾಮದಲ್ಲಿ ಮಿಲಿಟರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಸೆಪ್ಟೆಂಬರ್ 27, 1931 ರಂದು ನೌನಿಹಾಲ್ ಗ್ರಾಮದಲ್ಲಿ ಜನಿಸಿದ ಸಿಂಗ್ ಕೇವಲ 16 ವರ್ಷದ ಯುವಕನಾಗಿದ್ದಾಗಲೇ 1947-48ರಲ್ಲಿ ನೌಶೇರಾ ಮತ್ತು ಜಂಗಾರ್ ಯುದ್ಧದ ಸಮಯದಲ್ಲಿ 50 ಪ್ಯಾರಾ ಬ್ರಿಗೇಡ್ನ ಕಮಾಂಡರ್ ಬ್ರಿಗೇಡಿಯರ್ ಉಸ್ಮಾನ್ ನೇತೃತ್ವದಲ್ಲಿ ಬಾಲ ಸೇನಾ ಪಡೆಗೆ ಸ್ವಯಂ ಸೇವಕರಾಗಿ ಸೇರ್ಪಡೆಯಾಗಿದ್ದರು.
12 ರಿಂದ 16 ವರ್ಷ ವಯಸ್ಸಿನ ಸ್ಥಳೀಯ ಹುಡುಗರ ಗುಂಪಾದ ಬಾಲ ಸೇನೆ, ಈ ಯುದ್ಧಗಳ ನಿರ್ಣಾಯಕ ಕ್ಷಣಗಳಲ್ಲಿ ಭಾರತೀಯ ಸೇನೆಗೆ ರವಾನೆದಾರರಾಗಿ ಸೇವೆ ಸಲ್ಲಿಸುತಿತ್ತು. ಬಲದೇವ್ ಸಿಂಗ್ ಅವರ ಶೌರ್ಯವನ್ನು ಗುರುತಿಸಿ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಬಾಲ ಸೈನಿಕರಿಗೆ ಗ್ರಾಮಫೋನ್ಗಳು, ಕೈಗಡಿಯಾರ ನೀಡಿ ಗೌರವಿಸುವ ಮೂಲಕ ಸೈನ್ಯಕ್ಕೆ ಸೇರುವ ಅವಕಾಶ ನೀಡಿದ್ದರು.
ನವೆಂಬರ್ 14, 1950 ರಂದು ಸೇನೆಗೆ ಸೇರ್ಪಡೆಯಾದ ಸಿಂಗ್ ಅವರು ಸುಮಾರು ಮೂರು ದಶಕಗಳ ಕಾಲ ಸಮರ್ಪಣೆ ಮತ್ತು ಶೌರ್ಯದಿಂದ ಸೇನೆಗೆ ಸೇವೆ ಸಲ್ಲಿಸಿದ್ದರು. 1961, 1962 ಮತ್ತು 1965 ರ ಭಾರತ-ಪಾಕಿಸ್ತಾನ ಯುದ್ಧಗಳು ಸೇರಿದಂತೆ ಅನೇಕ ಯುದ್ಧಗಳಲ್ಲಿ ಅವರು ಹೋರಾಡಿದ್ದರು ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.
ನೆಹರು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಇತರ ಹಲವಾರು ಪ್ರತಿಷ್ಠಿತ ನಾಯಕರಿಂದ ಸನ್ಮಾನ್ ಸೇರಿದಂತೆ ತಮ್ಮ ವೃತ್ತಿಜೀವನದುದ್ದಕ್ಕೂ ಅತ್ಯುತ್ತಮ ಸೇವೆಗಾಗಿ ಹಲವಾರು ಗೌರವಗಳನ್ನು ಸಿಂಗ್ ಪಡೆದಿದ್ದಾರೆ.
ರಾಷ್ಟ್ರಕ್ಕೆ ಸಿಂಗ್ ಅವರ ಕೊಡುಗೆಗಳು ಸ್ಪೂರ್ತಿದಾಯಕವಾಗಿದ್ದು, ಜೀವಂತ ದಂತ ಕಥೆಯಾಗಿ ಜೀವಿಸಿದ್ದರು, ದೇಶಕ್ಕೆ ಅವರು ಮಾಡಿದ ಸೇವೆಗಾಗಿ ಅಪಾರ ಗೌರವ ಸಲ್ಲಿಸಲಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.