ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಭರ್ಜರಿಯಾಗಿ ಸೋಲಿಸಿ ಆಘಾತ ನೀಡಿದ್ದ ನ್ಯೂಜಿಲೆಂಡ್ ತಂಡ ಇದೀಗ ಬಾಂಗ್ಲಾ ದೇಶವನ್ನು ಸೋಲಿಸುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ತಂಡದ ಸೆಮಿಫೈನಲ್ ಆಸೆಗೆ ತಣ್ಣೀರೆರಚಿದೆ. ಹೀಗಾಗಿ ಎ ಬಣದಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಸೆಮಿಫೈನಲ್ ಟಿಕೆಟ್ ಖಾತ್ರಿಯಾಗಿದೆ. ಒಂದೂ ಪಂದ್ಯವನ್ನು ಗೆಲ್ಲದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಹೊರಬಿದ್ದಿವೆ.
ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ವಿರುದ್ದ ನಿರಂತರ ಎರಡು ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶ ದೂರವಾಗಿತ್ತು. ಆದರೂ ಸೋಮವಾರ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಅನ್ನು ಭಾರೀ ಅಂತರದಿಂದ ಸೋಲಿಸಿದಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್ ಆಶೆಯನ್ನು ಜೀವಂತವಾಗಿರಿಸಲು ಅವಕಾಶವಿತ್ತು. ಆದರೆ ಇದೀಗ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಗಳ ಅಂತರದಿಂದ ಸೋಲುವುರೊಂದಿಗೆ ಆ ಎಸೆಯೂ ಕಮರಿದೆ. ಜೊತೆಗೆ ಬಾಂಗ್ಲಾದೇಶ ತಂಡವೂ ಹೊರಬಿದ್ದಿದೆ. ಒಂದು ವೇಳೆ ಬಾಂಗ್ಲಾದೇಶ ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದಿದ್ದಲ್ಲಿ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿರುತ್ತಿತ್ತು.
ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ ಬಾಂಗ್ಲಾದೇಶವನ್ನು ಮತ್ತು ಭಾರತ ತಂಡ ನ್ಯೂಜಿಲೆಂಡ್ ಅನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿತ್ತು. ಆದರೆ ಅದ್ಯಾವುದಕ್ಕೂ ನ್ಯೂಜಿಲೆಂಡ್ ತಂಡ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಎ ಬಣದಲ್ಲಿ ಇನ್ನುಳಿದಿರುವ ಪಂದ್ಯಗಳು ಕೇವಲ ಔಪಚಾರಿಕತೆಗಷ್ಟೇ ಸೀಮಿತವಾಗಿವೆ.ಕನ್ನಡಿಗ ರಚಿನ್ ರವೀಂದ್ರ ಸೆಂಚುರಿ105 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ ಅವರು 12 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 112 ರನ್ ಗಳಿಸಿ ಔಟಾದರು. ತಂಡದ ಮೊತ್ತ 214 ಆಗಿದ್ದಾಗ ಅರ್ಧಶತಕ ಗಳಿಸಿದ್ದ ಟಾಮ್ ಲಾಥಮ್(55) ಅವರು ರನೌಟ್ ಆದರು. ಆದರೆ ಉಳಿದ ಕೆಲಸವನ್ನು ಗ್ಲೆನ್ ಫಿಲಿಪ್ಸ್ ಮತ್ತು ಬ್ರೇಸ್ ವೆಲ್ ಜೊತೆ ಸೇರಿ ಮುಗಿಸಿದರು.