ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಐಸಿಸಿ ಆದೇಶದಂತೆ ಆತಿಥೇಯ ಪಾಕಿಸ್ತಾನ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಸಮ್ಮತಿ ಸೂಚಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿರುವುದರ ಜೊತೆಗೆ ಪಾಕ್ ಕ್ರಿಕೆಟ್ ಮಂಡಳಿ, ಐಸಿಸಿ ಮುಂದಿಟ್ಟಿರುವ ಕೆಲವು ಷರತ್ತುಗಳ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ. ಈ ನಡುವೆ ಪಾಕ್ ಮಂಡಳಿ ಐಸಿಸಿ ಮುಂದಿಟ್ಟಿರುವ ಷರತ್ತುಗಳ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅಪಸ್ವರ ಎತ್ತಿದ್ದಾರೆ. ಮಂಡಳಿಯ ಕೆಲವು ಬೇಡಿಕೆಗಳು ಒಪ್ಪುವಂತದ್ದು ಎಂದಿರುವ ಅಖ್ತರ್, ಅದೊಂದು ಷರತ್ತಿಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಗೆ ಸೂಚಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇದರ ಜೊತೆಗೆ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಐಸಿಸಿ ಮುಂದಿಟ್ಟಿದೆ. ಅದರ ಮೊದಲನೆಯದ್ದಾಗಿ ಐಸಿಸಿ ತನ್ನ ವಾರ್ಷಿಕ ಆದಾಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಷರತ್ತನ್ನು ಪಿಸಿಬಿ ಮುಂದಿಟ್ಟಿದೆ. ಐಸಿಸಿಯ ಪ್ರಸ್ತುತ ಆದಾಯ ಮಾದರಿಯ ಅಡಿಯಲ್ಲಿ, ಬಿಸಿಸಿಐ ಗರಿಷ್ಠ ಹಣವನ್ನು ಅಂದರೆ ಶೇ, 39 ಪ್ರತಿಶತ ಹಣವನ್ನು ಪಡೆಯುತ್ತಿದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಕೇವಲ 5.75 ಪ್ರತಿಶತ ಹಣವನ್ನು ಪಡೆಯುತ್ತಿದೆ. ಇದೀಗ ಇದನ್ನೂ ಹೆಚ್ಚಿಸುವಂತೆ ಪಿಸಿಬಿ ಆಗ್ರಹಿಸುತ್ತಿದೆ.