ನೆಲಮಂಗಲ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹಲವೆಡೆ ನಿರ್ಮಿಸಿರುವ ಪಾದಚಾರಿ ಮಾರ್ಗಗಳು ಇದೀಗ ಅಂಗಡಿ ಮಾಲೀಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ವಾಹನ ನಿಲುಗಡೆ ಮಾಡುವವರಿಗೆ ವರದಾನವಾಗಿ ಮಾರ್ಪಟ್ಟಿವೆ.ನಗರದಲ್ಲಿ ಇತ್ತೀಚೆಗೆ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಪ್ರತಿದಿನ ಸಾವಿರಾರು ವಾಹನಗಳು, ಸಾರ್ವಜನಿಕರು ರಸ್ತೆಗೆ ಇಳಿಯುತ್ತಿದ್ದಾರೆ. ತಾಲ್ಲೂಕು ಕಚೇರಿ, ನಗರಸಭೆ, ಬಿಎಂಟಿಸಿ ಬಸ್ ನಿಲ್ದಾಣ, ಸಂತೆ ಬೀದಿ ರಸ್ತೆ, ಟಿಬಿ ಸ್ಟಾಪ್, ವೀವರ್ಸ್ ಕಾಲೋನಿ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು ಈ ರಸ್ತೆಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿರುವುದರಿಂದ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದಾರೆ.
ಅನೇಕರು ಈ ರಸ್ತೆಯನ್ನು ಹಾದು ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ, ಪಾದಚಾರಿಮಾರ್ಗ ಅತಿಕ್ರಮಣದಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಬಿಎಂಟಿಸಿ ಬಸ್ ನಿಲ್ದಾಣ, ಸಂತೆ ಬೀದಿ ರಸ್ತೆಯಲ್ಲಿ ಫುಟ್ಪಾತ್ ಎಲ್ಲಿದೆ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಇಲ್ಲಿ ಪಾದಚಾರಿಗಳು ಸ್ವಲ್ಪ ಮೈ ಮರೆತರೂ ಅಪಘಾತಕ್ಕೆ ಒಳಗಾಗುವ ಸ್ಥಿತಿ ಇದೆ.
ಮೊನ್ನೆಯಷ್ಟೇ ಬಿಎಂಟಿಸಿ ಬಸ್ ನಿಲ್ದಾಣದ ಎದುರು ನಡೆದ ಅಪಘಾತದಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ತಮ್ಮ ಮಕ್ಕಳು ಶಾಲೆ-ಕಾಲೇಜುಗಳಿಗೆ ತೆರಳುವಾಗ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿರುವುದರಿಂದ ಪೋಷಕರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಮಕ್ಕಳು ಸುರಕ್ಷಿತವಾಗಿ ತಿರುಗಿ ಮನೆಗೆ ಬರುವವರೆಗೂ ಜೀವ ಕೈಯಲ್ಲಿ ಹಿಡಿದು ಕಾಯುವಂತಾಗಿದೆ.
ನಗರದಲ್ಲಿ ದಿನದಿಂದ ದಿನಕ್ಕೆವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಈ ರಸ್ತೆಯಲ್ಲಿ ಸಂಚಾರವೂ ಹೆಚ್ಚಿದ ಕಾರಣ ಪಾದಚಾರಿ ಮಾರ್ಗ ಮತ್ತು ರಸ್ತೆಯ ಆಕ್ರಮಣದಿಂದಾಗಿ ನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು, ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳು ಓಡಾಡಲು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.