ಮೈಸೂರು: ಪಠ್ಯದ ವಸ್ತು ಮತ್ತು ಸಂದೇಶವನ್ನು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಮತ್ತು ಮನಮುಟ್ಟುವಂತೆ ತಲುಪಿಸಲು ರಂಗಭೂಮಿ ಪರಿಣಾಕಾರಿಯಾದ ಕಲಿಕಾ ಮಾಧ್ಯಮವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ ಅಭಿಪ್ರಾಯಪಟ್ಟರು.
ನಗರದ ಹೂಟಗಳ್ಳಿಯಲ್ಲಿನ ದಕ್ಷ ಕಾಲೇಜಿನ ಸಭಾಂಗಣದಲ್ಲಿ ಅದಮ್ಯ ರಂಗಶಾಲೆ, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ದಕ್ಷ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ‘ಪಿಯುಸಿ ಪಠ್ಯಾಧಾರಿತ ರಂಗ ಪ್ರದರ್ಶನ’ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸಿನಿಮಾ ಮತ್ತು ಟಿವಿ ಮಾಧ್ಯಮಕ್ಕೆ ನೀಡುವ ಆದ್ಯತೆಯನ್ನು ರಂಗಭೂಮಿಗೂ ನೀಡಬೇಕು. ಪಠ್ಯವನ್ನು ಆಧರಿಸಿದ ರಂಗಪ್ರದರ್ಶವನ್ನು ಆಸಕ್ತಿಯಿಂದ ವೀಕ್ಷಣೆ ಮಾಡಿ ತಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ನಾಟಕದ ಮೂಲಕ ಕಲಿತದ್ದು ಸ್ಥಿರವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ರಂಗಭೂಮಿ ಮೂಲಕ ಉತ್ತಮ ಕಲಿಕೆಯನ್ನು ಸಾಧಿಸಬೇಕು ಎಂದರು.
ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಪ್ರಯೋಗಶೀಲ ಕಲಿಕಾ ಪ್ರಕ್ರಿಯೆ ತುಂಬಾ ಮುಖ್ಯ. ಪಠ್ಯದಲ್ಲಿನ ಕತೆಗಳನ್ನು ರಂಗ ಪ್ರಯೋಗಕ್ಕೆ ತಂದು ವಿದ್ಯಾರ್ಥಿಗಳಿಗೆ ತಲುಪಿಸಿದದರೆ ಅಂತರ್ ಸಂವಹನ ಕಲಿಕೆ ಬಲವಾಗುತ್ತದೆ. ಹಾಗೆಯೇ, ಭೋಧನಾ ಸಮಯದಲ್ಲಿ ವಿದ್ಯಾರ್ಥಿಗಳು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವುದರಿಂದ ಸಂಶೋಧನಾ ಪ್ರಯತ್ನಗಳು ನಡೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಷಹಸೀನಾ ಬೇಗಂ ಮಾತನಾಡಿ ‘ಸಮಕಾಲೀನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡಬಾರದು. ಅದನ್ನು ಕಲಿಕೆಗೆ ಪೂರಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣದ ಬದುಕನ್ನು ರೂಪಿಸಿಕೊಳ್ಳಬೇಕು ಎದರು ಕಿವಿಮಾತು ಹೇಳಿದರು.
ಪಠ್ಯ ಕೃತಿಯ ಓದಿ, ಅದರ ರಂಗರೂಪ ವೀಕ್ಷಣೆ ಮಾಡಿದರೆ ಕಲಿಕೆ ನೆನಪಿನಲ್ಲಿ ಉಳಿಯುತ್ತದೆ. ಜೊತೆಗೆ ನಾವು ಮಾನಸಿಕ ಬದಲಾವಣೆಗೆ ಒಳಗಾಗುತ್ತೇವೆ. ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಆ ಮೂಲಕ ಮೌಲ್ಯಗಳನ್ನೂ ಮೈಗೂಡಿಸಿಕೊಳ್ಳುತ್ತೇವೆ. ಇದಕ್ಕೆ ನಿದರ್ಶನವಾಗಿ ಸತ್ಯ ಹರಿಶ್ಚಂದ್ರ ಮತ್ತು ಶ್ರವಣಕುಮಾರ ನಾಟಕ ನೋಡಿ ಬದಲಾದ ಮಹಾತ್ಮ ಗಾಂಧಿಯವರ ಬದುಕು ನಮ್ಮ ಮುಂದಿದೆ’ ಎಂದರು.
ಸಾಹಿತಿ ಡಾ. ಹಾಲತಿ ಸೋಮಶೇಖರ್ ಮಾತನಾಡಿ ‘ಕಲೆಗಳಲ್ಲಿಯೇ ನಾಟಕ ಅತ್ಯಂತ ರಮಣೀಯವಾದುದು. ಸಂಭಾಷಣೆ – ಸಂವಾದ ಹೊಂದಿರುವ ದೃಶ್ಯ – ಶ್ರವ್ಯ ರೂಪದ ಪ್ರಬಲ ಮಾಧ್ಯಮವಾದ ಕಾರಣ ಮನಸ್ಸನ್ನು ಸೆರೆಹಿಡಿಯುತ್ತದೆ. ಮನೋಮಂದಿರದಲ್ಲಿ ರಂಗಮಂದಿರ ನಿರ್ಮಿಸಿತ್ತದೆ ಎಂದರು.ವಿದ್ಯಾರ್ಥಿ ಜೀವನ ಬದುಕಿನ ಸುವರ್ಣ ಕಾಲ. ಈ ಕಾಲದಲ್ಲಿ ವಿದ್ಯಾರ್ಥಿಗಳು ಅಚಲತೆ, ದಕ್ಷತೆ, ಶ್ರದ್ಧೆಯಿಂದ ಧ್ಯಾನಾಸಕ್ತರಾಗಿ ಓದಿ ಸಾಂಸ್ಕೃತಿಕ ಸಿರಿವಂತಿಕೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಬದಲಾವಣೆಗೆ ತೆರೆದುಕೊಂಡು ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ಮಾತಗಳನ್ನಾಡಿದರು. ದಕ್ಷ ಪದವಿಪೂರ್ವ ಮತ್ತು ಪದವಿ ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರ ರಾಜು, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿ ನಾಗೇಶ್ ಕಾವ್ಯಪ್ರಿಯ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಪಿಯುಸಿ ಪಠ್ಯಾಧಾರಿತ ರಂಗಪ್ರದರ್ಶನ ನಡೆಯಿತು.