ಮಾಸ್ಕೋ: ಉಕ್ರೇನ್ ಸಂಘರ್ಷದ ಕುರಿತು ಕಳೆದ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ನಲ್ಲಿ ಮಾತನಾಡಿದ್ದಾರೆ ಎಂಬ ಅಮೆರಿಕ ಮಾಧ್ಯಮಗಳ ವರದಿಯನ್ನು ರಷ್ಯಾ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಟ್ರಂಪ್ ಅವರು ಗುರುವಾರ ಪುಟಿನ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ಉಕ್ರೇನ್ ಜೊತೆಗಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿರುವುದಾಗಿ ವಾಷಿಂಗ್ಟನ್ ಪೋಸ್ಟ್ ಭಾನುವಾರ ವರದಿ ಮಾಡಿತ್ತು.
ಈ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ಟ್ರಪ್, ಪುಟಿನ್ ಅವರಿಗೆ ಯಾವುದೇ ಫೋನ್ ಕರೆ ಮಾಡಿಲ್ಲ. ವಾಷಿಂಗ್ಟನ್ ಪೋಸ್ಟ್ ವರದಿಯು “ಸುಳ್ಳು ಮಾಹಿತಿ, ಇದು ಶುದ್ಧ ಕಾಲ್ಪನಿಕ” ಎಂದು ಹೇಳಿದ್ದಾರೆ.
ಉಭಯ ನಾಯಕರ ನಡುವೆ ಸಂಭಾಷಣೆ ನಡೆದಿದೆ ಎಂಬ ಕಪೋಲ ಕಲ್ಪಿತ ವರದಿಗಳನ್ನು ಪ್ರಕಟಿಸಿದ ಅಮೆರಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಕ್ರೆಮ್ಲಿನ್ ವಕ್ತಾರರು, “ಇದು ಈಗಿನ ಮಾಧ್ಯಮಗಳ ಕಳಪೆ ಗುಣಮಟ್ಟದ ವರದಿಗಾರಿಕೆಗೆ ಅತ್ಯಂತ ಸ್ಪಷ್ಟ ಉದಾಹರಣೆ. ಕೆಲವೊಮ್ಮೆ ಸಾಕಷ್ಟು ಗೌರವಾನ್ವಿತ ಮಾಧ್ಯಮಗಳು ಸಹ ಇಂಥ ತಪ್ಪು ಮಾಡುತ್ತಿವೆ” ಎಂದು ಕಿಡಿಕಾರಿದ್ದಾರೆ.
ಫೆಬ್ರವರಿ 2022 ರಲ್ಲಿ ಆರಂಭವಾದ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮಾಸ್ಕೋದೊಂದಿಗೆ ಹೆಚ್ಚಿನ ಚರ್ಚೆ ನಡೆಸುವ ಆಸಕ್ತಿಯನ್ನು ಟ್ರಂಪ್ ವ್ಯಕ್ತಪಡಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ. ಯುರೋಪ್ ನಲ್ಲಿ ಗಣನೀಯ ಅಮೆರಿಕ ಮಿಲಿಟರಿ ಉಪಸ್ಥಿತಿಯ ಮಹತ್ವವನ್ನು ಟ್ರಂಪ್ ಎತ್ತಿ ತೋರಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದವು.