ಹೈದರಾಬಾದ್: ನಟ ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ನ ಪ್ರೀಮಿಯರ್ ಶೋ ವೇಳೆ ಚಿತ್ರಮಂದಿರವೊಂದರ ಬಳಿ ಭಾರಿ ಜನಸಂದಣಿಯಿಂದ ಉಂಟಾದ ನೂಕು ನುಗ್ಗಲಿನಿಂದ ಮಹಿಳೆಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿತ್ರಮಂದಿರದಲ್ಲಿ ಜಮಾಯಿಸಿದ್ದರು. ಅಲ್ಲು ಅರ್ಜುನ್ ಹಾಗೂ ಚಿತ್ರದ ಇತರ ನಟರ ಆಗಮನದ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ .ಥಿಯೇಟರ್ ಆಡಳಿತ ಕೂಡಾ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಥಿಯೇಟರ್ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಮಹಿಳೆ ಮತ್ತು ಅವರ ಮಗ ಭಾರಿ ಜನಸಂದಣಿಯಿಂದ ನೂಕಲ್ಪಟ್ಟಿದ್ದು, ನಂತರ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿರುವುದಾಗಿ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ತಿಳಿಸಿದ್ದಾರೆ.
ಥಿಯೇಟರ್ ಚಿಕ್ಕದಾಗಿದ್ದು, ಇಷ್ಟೊಂದು ಜನಸಂದಣಿಗೆ ಅವಕಾಶ ಕಲ್ಪಿಸಬಾರದಿತ್ತು. ಪೊಲೀಸ್ ಸಿಬ್ಬಂದಿ ಮಹಿಳೆ ಮತ್ತು ಆಕೆಯ ಮಗನಿಗೆ ಸಿಪಿಆರ್ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಅಲ್ಲಿ ಮಹಿಳೆ ಸಾವನ್ನಪ್ಪಿದ್ದು, ಅವರ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.