ಬೆಂಗಳೂರು: ಟ್ಯೂಷನ್ಗೆ ಬರುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿ ಶಿಕ್ಷಕನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.ತನ್ನ ಮಗಳನ್ನು ಟ್ಯೂಷನ್ ಟೀಚರ್ ಕರೆದೊಯ್ದಿರುವುದಾಗಿ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಭಿಷೇಕ್ ಗೌಡ (25) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಂದೂವರೆ ತಿಂಗಳ ನಂತರ ಆರೋಪಿಯನ್ನು ಬಂಧಿಸಿ ಅಪ್ರಾಪ್ತೆಯನ್ನು ಸರ್ಕಾರಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನಕಪುರದ ದೊಡ್ಡಸಾತೇನಹಳ್ಳಿಯ ಅಭಿಷೇಕ್ಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಒಂದು ಮಗುವಿದೆ. ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ಆರೋಪಿ ದೂರವಾಗಿದ್ದ. ನ್ಯೂಟ್ರಿಷಿಯನ್ ಆಗಿಯೂ ಕೆಲಸ ಮಾಡುತ್ತಿದ್ದ.ಡಿಪ್ಲೋಮಾ ವ್ಯಾಸಂಗ ಮಾಡಿದ್ದ ಆರೋಪಿ, ಜೆ.ಪಿ.ನಗರದ ಸಾರಕ್ಕಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ.
ಹಲವು ವರ್ಷಗಳಿಂದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ ಎಂದುಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಆರು ವರ್ಷಗಳಿಂದ ಟ್ಯೂಷನ್ಗೆ ಬರುತ್ತಿದ್ದಳು. ಕಳೆದ ನವೆಂಬರ್ 23ರಂದು ಎಂದಿನಂತೆ ಟ್ಯೂಷನ್ಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ.ಮಗಳು ಬಾರದಿರುವುದರಿಂದ ಆತಂಕಗೊಂಡ ಪೋಷಕರು ಆರೋಪಿಯ ಮನೆಗೆ ಹೋದಾಗ ಬೀಗ ಹಾಕಿರುವುದನ್ನು ಕಂಡಿದ್ದರು. ಟ್ಯೂಷನ್ ಟೀಚರ್ ಪುಸಲಾಯಿಸಿ ಮಗಳನ್ನು ಕರೆದೊಯ್ದಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಒಂದೂವರೆ ತಿಂಗಳ ಬಳಿಕ ಇದೀಗ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.