ಪುಸ್ತಕಗಳು ನಿಜವಾದ ಮಿತ್ರರು. ಪ್ರಾಣಮಿತ್ರರೂ ಒಮ್ಮೆಮ್ಮೆ ಶತ್ರುಗಳಾಗಬಹುದು. ಆದರೆ ಪುಸ್ತಕಗಳು ಮಾತ್ರ ಜ್ಞಾನ ನೀಡುವ ಮಾರ್ಗದರ್ಶಿ ಹಾಗೂ ಹಿತೈಷಿಯಾಗಿ ನಮ್ಮೊಡನೆ ಉಳಿಯುತ್ತದೆ ಎಂದು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿಯವರು ತಿಳಿಸಿದರು. ಶ್ರೀಯುತರು ಬ್ಯಾಂಕರ್ಸ್ ಕನ್ನಡಿಗರ ಬಳಗದವರು ಬಾಗಲೂರು ಸರಕಾರಿ ಮಾದರಿ ಪ್ರಾರ್ಥಮಿಕ ಪಾಠಶಾಲೆಯ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳ ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಸಾಹಿತ್ಯ ರಚಿಸುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಈ ಸಂಬಂಧ ಪೋಷಕರು ಮತ್ತು ಶಿಕ್ಷಕರು ನೀರೆರೆದು ಪೋಷಿಸಬೇಕೆಂದು ಸಲಹೆ ನೀಡಿದರು. ಬಳಗದ ಕಾರ್ಯದರ್ಶಿ ಕೆ.ಜಿ.ಸಂಪತ್ ಕುಮಾರ್ ರವರು ಮಾತನಾಡಿ ಮಕ್ಕಳು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯುವುದಲ್ಲದೆ, ಅದನ್ನು ಓದಿ, ಪುಸ್ತಕದಿಂದ ಪಡೆದ ಜ್ಞಾನವನ್ನು ಶಾಲೆಯ ಪ್ರಾರ್ಥನಾ ಸಮಯದಲ್ಲಿ ಉಳಿದ ಮಕ್ಕಳೊಡನೆ ಹಂಚಿಕೊಳ್ಳಬೇಕು ಅಂದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಂ ಎಸ್ ಸಂಗೀತ, ಉಪಾಧ್ಯಾಯಿನಿ ಶ್ರೀಮತಿ ಎನ್ ಪಿ ವೀಣಾ ಮತ್ತು ಶಾಲೆಯ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.