ಮೇಲುಕೋಟೆ: ಕವಿಪುತಿನರ ಸಾಹಿತ್ಯದಿಂದ ನಾಡಿಗೆ ಕೊಡುಗೆಯಾಗಬೇಕಿದೆ. ಪು.ತಿ.ನ ಸಾಹಿತ್ಯ ಹಾಗೂ ಹೆಸರನ್ನು ಪ್ರಚಾರ ಮಾಡುವುದರಿಂದ ನಾವು ಕನ್ನಡಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಪು.ತಿ.ನ ಟ್ರಸ್ಟ್ ನೂತನ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ತಿಳಿಸಿದರು. ಅವರು ಭಾನುವಾರ ಮೇಲುಕೋಟೆಯಲ್ಲಿ ಅಧ್ಯಕ್ಷರಾಗಿ ಪದಗ್ರಹಣಮಾಡಿ ಮಾತನಾಡಿದರು.
ಪು.ತಿ.ನ ಕಾವ್ಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಅವರ ಹೆಸರು ನಿತ್ಯನೂತನವಾಗಿರುವಂತಹ ಕಾರ್ಯಕ್ರಮಗಳನ್ನು ಪುತಿನ ಟ್ರಸ್ಟ್ ರೂಪಿಸುತ್ತದೆ ಕುವೆಂಪು. ಬೇಂದ್ರೆ. ಪು.ತಿ.ನ ನವೋದಯ ಸಾಹಿತ್ಯದ ರತ್ನತ್ರಯರು. ಶಿಕ್ಷಕರಾಗಿದ್ದರಿಂದ ಶಿಷ್ಯರಿಂದ ಕುವೆಂಪುಗೆ ಬೇಂದ್ರೆಗೆ ದೊರೆತ ಪ್ರಚಾರ ಪು.ತಿ.ನಗೆ ದೊರೆತಿಲ್ಲ ಪುತಿನ ಸಾಹಿತ್ಯದ ಅಧ್ಯಯನಮಾಡಿದರೆ ಅವರ ಕಾವ್ಯದ ಚಿಂತನೆಗಳು ಅರ್ಥವಾಗುತ್ತದೆ. ಬದುಕು ಲಘುವಾಗಿರಬೇಕು ಎಂಬ ಅವರ ಕಾವ್ಯ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ. ಸಮಾಜಮುಖಿ ಅವರ ಆದ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆ ರಸಮಯ ಕಾವ್ಯಸ್ವರೂಪ ಪಡೆದುಕೊಂಡಿದ್ದು ಭಾಷಾಷೆ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಇಂಗ್ಲೀಷ್ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪು.ತಿ.ನ ಬ್ರಿಟೀಷರ ಸೈನ್ಯದಲ್ಲಿ ಕೆಲಸಮಾಡುತ್ತಿದ್ದರು. ಇಂಗ್ಲೀಷ್ನಲ್ಲಿ ಸಾಹಿತ್ಯ ಕೃಷಿಮಾಡಿದ್ದರೆ ಪುತಿನ ಅಂತರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದ್ದರು. ಆದರೆ ಕನ್ನಡಾಭಿಮಾನಿಯಾದ ಸ್ವಾರ್ಥಬಯಸದ ಪುತಿನ ಕನ್ನಡಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿ ಕರುನಾಡಿನ ಸಾಹಿತ್ಯಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ. ಕರುನಾಡಿಗೆ ಕೀರ್ತಿತಂದಿದ್ದಾರೆ. ಯಾವುದೇ ಅಧಿಕಾರವಿಲ್ಲದೆ ಶಿಕ್ಷಕನಾಗಿ ಸೇವೆಮಾಡಿದ ನಾನು ಸಮಾಜಕ್ಕೆ ಅಳಿಲುಸೇವೆ ಮಾಡುತ್ತಿದ್ದೇನೆ ಪುತಿನ ಟ್ರಸ್ಟ್ ಅಧ್ಯಕ್ಷನಾಗಿ ಜವಬ್ದಾರಿ ವಹಿಸಿಕೊಂಡು ಪುತಿನ ಸಾಹಿತ್ಯವನ್ನು ಪ್ರಚಾರಮಾಡುವ ಮೂಲಕ ಭಾಷಾಬೆಳವಣಿಗೆಗೆ ಸೇವೆಮಾಡುವ ಆಶಯ ನಮ್ಮದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪುತಿನ ಪುತ್ರಿ ಹಾಗೂ ಖ್ಯಾತ ಸಾಹಿತಿ ಅಲಮೇಲು ಮಾತನಾಡಿ ಅಮೇರಿಕದಲ್ಲಿ ಪುತಿನ ಗೀತರೂಪಕಗಳಿಗೆ ದೃಶ್ಯವೈಭವವನ್ನು ನೀಡಿ ಪ್ರದರ್ಶಿಸುವ ಕಾರ್ಯಮಾಡಲಾಗುತ್ತಿದೆ. ಸ್ವತಃ 20 ನಾಟಕಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. ಅಲ್ಲಿ ಕನ್ನಡಸಂಘ ಮಾಡಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೀಗ ಕನ್ನಡ ಸಂಘದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ವಿದೇಶಿನೆಲದಲ್ಲಿ ಕನ್ನಡದ ಕಂಪುಹರಡುವ ಕೆಲಮಾಡಲಾಗುತ್ತಿದೆ. ಮಹಾಕವಿಗಳು ಮುನ್ನಡೆಸಿದ ಪುತಿನ ಟ್ರಸ್ಟ್ ಸಾರಥ್ಯ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಗಣನೀಯ ಖ್ಯಾತಿ ಪಡೆದಿರುವ ಪ್ರೊ ಕೃಷ್ಣೇಗೌಡರಿಗೆ ಲಭಿಸಿರುವುದು ಅರ್ಥಪೂರ್ಣವಾಗಿದೆ. ಗೌಡರ ಮುಂದಾಳತ್ವದಲ್ಲಿ ಪುತಿನ ಕೃತಿ, ಸಾಹಿತ್ಯದ ವಿಚಾರಧಾರೆಗಳನ್ನು ಪ್ರಚಾರಮಾಡುವ ಕಾರ್ಯ ಮೇಲುಕೋಟೆ ಹಾಗೂ ನಾಡಿನಾದ್ಯಂತ ಹೆಚ್ಚಿನ ಮಟ್ಟದಲ್ಲಿ ನಡೆಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷೆ ಹಾಗೂ ಮಂಡ್ಯದ ಎಸ್.ಬಿ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ. ಕವಿ ಪುತಿನ ಟ್ರಸ್ಟ್ ಸದಸ್ಯರಾದ ಬಿ.ಎನ್ ಸುರೇಶ್, ಡಾ.ಸುಮಾರಾಣಿಶಂಬು,.ಕೆ.ಜಿ. ನಾರಾಯಣ, ಕೊಪ್ಪಕುಮಾರ್, ಟಿ ಚಂದ್ರೇಗೌಡ, ಕನ್ನಡಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.