ಇದೇ 5ನೇ ಜನವರಿ 2025 ಭಾನುವಾರದಂದು ಖ್ಯಾತ ವೈದ್ಯರಾದ ಡಾ ನಾಗರಾಜ್ ದೇಶ ಪಾಂಡೆ ಅವರ “ಪೃಥ್ವಿವಲ್ಲಭ ಕನ್ನರದೇವ” ಐತಿಹಾಸಿಕ ಕಾದಂಬರಿ ಹಾಗೂ “ತಾಳ್ಮೆ” ಕವನ ಸಂಕಲನಗಳು ಲೋಕಾರ್ಪಣೆಗೊಂಡವು.ಈ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಸನ ರತ್ನಾಕರ ಎಂದೇ ಪ್ರಸಿದ್ಧರಾದ ಶ್ರೀ ದೇವರಕೊಂಡಾ ರೆಡ್ಡಿಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ .ಹಂ ಪಾ ನಾಗರಾಜಯ್ಯನವರು, ಗಮಕಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಡಾ ಶ್ರೀಮತಿ ಆರತಿ ವಿ ಬಿ, ಡಾ ರಮಾನಂದ, ಶ್ರೀ ಶೇಷಾಚಲ ಹವಾಲ್ದಾರ್ ಮತ್ತು ಶ್ರೀ ಅನಂತ್ ಅವರು ಭಾಗವಹಿಸಿದ್ದರು. ಹಂ.ಪಾ.ನಾ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.
ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹಂ ಪಾ ನಾ ಈ ಕೃತಿಯು ಯುದ್ಧಗಳ ನಿರೂಪಣೆ ಮಾತ್ರ ನೀಡುವುದಿಲ್ಲ, ನಾನಾ ರಾಜರ ಕಿರು ಪರಿಚಯ ನೀಡುತ್ತದೆ. ಈ ಕೃತಿ ಡಾ ನಾಗರಾಜ್ ದೇಶಪಾಂಡೆಯವರ ಸೃಜನ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಈ ಕಾದಂಬರಿ ಒಮ್ಮೆ ವರದಿಯಂತೆ, ಇನ್ನೊಮ್ಮೆ ಚರಿತ್ರೆಯ ಪುಟಗಳಂತೆ, ಮತ್ತೊಮ್ಮೆ ಶಾಸನ ಪಠ್ಯದಂತೆ ಮಗದೊಮ್ಮೆ ಸಾಹಸಗಾಥೆಯಂತೆ ಓದಿಸಿಕೊಂಡು ಹೋಗುತ್ತದೆ. ಶ್ರೀ ದೇವರಕೊಂಡಾ ರೆಡ್ಡಿಯವರು ಈ ಕೃತಿ ನಮ್ಮ 9-10ನೆಯ ಶತಮಾನದ ಗತವೈಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇಂತಹ ಅಪೂರ್ವ ಕೃತಿಯನ್ನು ರಚಿಸಿರುವ ಡಾ ದೇಶಪಾಂಡೆಯವರು ಶ್ಲಾಘನಾರ್ಹರು ಎಂದು ಹೇಳಿದರು.
ಈ ಕೃತಿಯಲ್ಲಿ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ತ್ರಿವೇಣಿ ಸಂಗಮ ಜೀವ ತಳೆದಿದೆ ಎಂದು ಡಾ ರಮಾನಂದ ನುಡಿದರು. ಇಂತಹ ಪುಸ್ತಕವನ್ನು ನೀಡಿದ ಡಾ ನಾಗರಾಜ್ ದೇಶಪಾಂಡೆಯವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ ಎಂದು ಆಶಿಸೋಣ.
-ಮಾಧುರಿ ಕುಲಕರ್ಣಿ