ಐದು ವರ್ಷಗಳ ಬಳಿಕ ಕನ್ನಡ ಸಿನಿಮಾಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸಿದೆ. 2019ನೇ ಸಾಲಿ ಚಿತ್ರಗಳಿಗೆ ಇದೀಗ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದೆ. `ಪೈಲ್ವಾನ್’ ಚಿತ್ರದ ನಟನೆಗಾಗಿ ಸುದೀಪ್ ಅತ್ಯುತ್ತಮ ನಟ, `ತ್ರಯಂಬಕಂ’ ಚಿತ್ರಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ರಾಜ್ಯ ಪ್ರಶಸ್ತಿಗಾಗಿ 180 ಚಿತ್ರತಂಡಗಳು ಅರ್ಜಿ ಹಾಕಿದ್ದವು. 8 ಸಿನಿಮಾಗಳು ನಿಯಮಾನುಸಾರ ಇಲ್ಲ ಎಂದು ಕೈಬಿಡಲಾಗಿತ್ತು. ಇನ್ನುಳಿದ 172 ಸಿನಿಮಾಗಳನ್ನು ತೀರ್ಪುಗಾರರು ವೀಕ್ಷಿಸಿ, ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಅದೇ ರೀತಿ ‘ಲವ್ ಮಾಕ್ಟೇಲ್’ 2ನೇ ಅತ್ಯುತ್ತಮ ಸಿನಿಮಾ, ‘ಅರ್ಘ್ಯಂ’ 3ನೇ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿದೆ. ಇನ್ನು ವಿಜೇತರಿಗೆ ಸಿಗುವ ಪದಕ, ನಗದು ಬಹುಮಾನದ ಬಗ್ಗೆ ಮಾಹಿತ್ಯ ಲಭ್ಯವಾಗಿದೆ.
ಒಟ್ಟು 24 ವಿಭಾಗಗಳಲ್ಲಿ 25 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರಗಳ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಪ್ರತ್ಯೇಕವಾಗಿ ಪದಕ ಹಾಗೂ ನಗದು ಬಹುಮಾನ ಸಿಗಲಿದೆ. ಮೊದಲನೆ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನ ಆಗಿರುವ ‘ಮೋಹನದಾಸ’ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ತಲಾ ಒಂದು ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಸಿಗಲಿದೆ. ಪಿ. ಶೇಷಾದ್ರಿ ಈ ಚಿತ್ರ ನಿರ್ಮಿಸಿ, ನಿರ್ದೇಶನ ಮಾಡಿದ್ದರು. 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ‘ಲವ್ ಮಾಕ್ಟೇಲ್’ ಚಿತ್ರ ಭಾಜನವಾಗಿದೆ. ಚಿತ್ರದ ನಿರ್ಮಾಪಕ ಎ. ನಾಗಪ್ಪ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರಿಗೆ ತಲಾ ಎಪ್ಪತ್ತೈದು ಸಾವಿರ ರೂ. ನಗದು, 100 ಗ್ರಾಂ ಬೆಳ್ಳಿ ಪದಕ ಸಿಗಲಿದೆ. ಕೃಷ್ಣ ಅವರ ತಂದೆ ಎ. ನಾಗಪ್ಪ ಚಿತ್ರ ನಿರ್ಮಿಸಿದ್ದರು.
‘ಅರ್ಘ್ಯಂ’ ಚಿತ್ರದ 3ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಈ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ 50 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ ದೊರೆಯಲಿದೆ. ವೈ. ಶ್ರೀನಿವಾಸ್ ಅವರೇ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದರು. ವಿಶೇಷ ಸಾಮಾಜಿಕ ಕಾಳಜಿ ಚಿತ್ರ ಪ್ರಶಸ್ತಿ ‘ಕನ್ನೇರಿ’ ಚಿತ್ರದ ಪಾಲಾಗಿದೆ. ಮಂಜುನಾಥ್ ಎಸ್. ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದರು. ಎಪ್ಪತ್ತೈದು ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ(2) ಪದಕವನ್ನು ಅವರು ಪಡೆಯಲಿದ್ದಾರೆ. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ‘ಇಂಡಿಯಾ vs ಇಂಗ್ಲೆಂಡ್’. ಚಿತ್ರದ ನಿರ್ಮಾಪಕ ಎನ್. ಶಂಕರೇ ಗೌಡ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ತಲಾ 50 ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಸಿಗಲಿದೆ.
ಇನ್ನು ಅತ್ಯುತ್ತಮ ಮಕ್ಕಳ ಚಿತ್ರ ಎಲ್ಲಿ ಆಡೋದು ನಾವು ಎಲ್ಲಿ ಆಡೋದು, ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ ‘ಗೋಪಾಲಗಾಂಧಿ’ ಹಾಗೂ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ ತ್ರಿಬಲ್ ತಲಾಕ್ (ಬ್ಯಾರಿ ಭಾಷೆ) ನಿರ್ಮಾಪಕರು, ನಿರ್ದೇಶಕರು 50 ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಸ್ವೀಕರಿಸಲಿದ್ದಾರೆ. ಅತ್ಯುತ್ತಮ ನಟ ಸುಬ್ಬಯ್ಯ ನಾಯ್ಡು ಪ್ರಶಸ್ತಿಯನ್ನು ಸುದೀಪ್ ಪಡೆಯುತ್ತಿದ್ದಾರೆ. ಅವರಿಗೆ 20 ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ದೊರೆಯುತ್ತದೆ. ಇನ್ನುಳಿದಂತೆ ಅತ್ಯುತ್ತಮ ನಟಿ, ಅತ್ಯುತ್ತಮ ನಟಿ ಸಂಗೀತ ನಿರ್ದೇಶಕ, ಅತ್ಯುತ್ತಮ ನಟಿ ಬಾಲ ನಟ ಹೀಗೆ ಎಲ್ಲರಿಗೂ ಇದೇ ಮೊತ್ತದ ನಗದು ಹಾಗೂ ಬೆಳ್ಳಿ ಪದಕ ಸಿಗಲಿದೆ.