ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ.
ಮೂಲತಃ ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್ನಲ್ಲಿ 15 ಜನರಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ದರೋಡೆ ನಡೆದಿತ್ತು. ಕಾರು ಚಾಲಕನಿಗೆ ಬೆದರಿಕೆ ಹಾಕಿ ಫಾರೂಕ್ ಹಾಗೂ ಭರತ್ ಗ್ಯಾಂಗ್ ದರೋಡೆ ಮಾಡಿದ್ದರು. ನವೆಂಬರ್ 8 ರಂದು ದರೋಡೆ ನಡೆದಿತ್ತು. ಈ ಸಂಬಂಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
15 ಜನರ ಗ್ಯಾಂಗ್ ಪೈಕಿ ಇಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದರು. ಭಾನುವಾರ ಸ್ಥಳ ಮಹಜರು ಮಾಡುವ ವೇಳೆ ಖದೀಮರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ. ಅಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿದ್ದು, ಆರೋಪಿಗಳು ಗಾಯಗೊಂಡಿದ್ದಾರೆ. ಫಾರೂಕ್ಗೆ ಎರಡು ಗುಂಡುಗಳು ತಗುಲಿದ್ದರೆ. ಭರತ್ಕುಮಾರ್ಗೆ ಕಾಲಿಗೆ ಒಂದು ಗುಂಡೇಟು ಬಿದ್ದಿದೆ.
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗ್ಯಾಂಗ್ ನಲ್ಲಿರುವ ಉಳಿದ ಸದಸ್ಯರ ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದ್ದು, ರಾಜ್ಯ ಮತ್ತು ನೆರೆಯ ಕೇರಳದಾದ್ಯಂತ ನಾಲ್ಕು ತಂಡಗಳನ್ನು ರವಾನಿಸಲಾಗಿದೆ. ಫಾರೂಕ್ ವಿರುದ್ಧ 2001 ರಿಂದ 16 ಕೊಲೆ, ಡಕಾಯಿತಿ ಮತ್ತು ದರೋಡೆ ಪ್ರಕರಣಗಳೊಂದಿಗೆ 16 ಪ್ರಕರಣಗಳನ್ನು ದಾಖಲಿಸಾಗಿದ್ದು, ಭರತ್ಕುಮಾರ್ ಮೂರು ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಗ್ಯಾಂಗ್ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.