ಮಂಡ್ಯ: ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದ ಪೊಲೀಸ್ ಪೇದೆಗೆ ವ್ಯಕ್ತಿಯೋರ್ವ ಕಾಪಳ ಮೋಕ್ಷ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದಿದ್ದು, ತನ್ನ ಕಪಾಳಕ್ಕೆ ಹೊಡೆದ ಪೊಲೀಸ್ ಕಾನ್ಸ್ಟೇಬಲ್ಗೆ ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ‘ಪಟ್ಟಣದ ಹಿರೋಡೆ ಬೀದಿಯ ಪಿ.ಎಸ್.ಜಗದೀಶ್ ಅವರ ಪುತ್ರ ಸಾಗರ್ (30) ಎಂಬಾತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದವ ಎನ್ನಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಅಭಿಷೇಕ್ ಮೇಲೆ ಹಲ್ಲೆ ಮಾಡಿದ ಸಾಗರ್ನನ್ನು ಬಂಧಿಸಿ ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಮೀನಿನ ವಿಚಾರವಾಗಿ ನಡೆದಿದ್ದ ಜಗಳದ ಸಂಬಂಧ ಲಕ್ಷ್ಮೀನಾರಾಯಣ ಎಂಬುವವರು ಸಾಗರ್ ವಿರುದ್ಧ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನೂ ಶನಿವಾರ ಪೊಲೀಸ್ ಠಾಣೆಗೆ ಕರೆಯಿಸಲಾಗಿತ್ತು. ಠಾಣೆಯಲ್ಲಿ ಮತ್ತೆ ಸಾಗರ್, ಲಕ್ಷ್ಮೀನಾರಾಯುಣ್ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಕಾನ್ಸ್ಟೇಬಲ್ ಅಭಿಷೇಕ್, ಸಾಗರ್ನನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಪೇದೆ ಅಭಿಷೇಕ್ ಸಾಗರ್ ಗೆ ಒಂದೇಟು ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಸಾಗರ್, ಪೊಲೀಸ್ ಕಾನ್ಸ್ಟೇಬಲ್ ಅಭಿಷೇಕ್ ಅವರ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ್ದಾನೆ
ಕರ್ತವ್ಯದಲ್ಲೇ ಇದ್ದ ಪೊಲೀಸರುಗಳಾದ ಲಕ್ಷ್ಮೀ ಮತ್ತು ಆನಂದ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಸಾಗರ್, ನನ್ನ ವಿಚಾರಕ್ಕೆ ಬರಬೇಡಿ ಎಂದು ಲಕ್ಷ್ಮೀ ಮತ್ತು ಆನಂದ ಅವರಿಗೂ ಧಮ್ಮಿ ಹಾಕಿ, ಕುಡಿಯುವ ನೀರಿನ ಕ್ಯಾನ್ ಎತ್ತಿ ಬಿಸಾಡಿ ದಾಂಧಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಾನ್ಸ್ಟೇಬಲ್ ಅಭಿಷೇಕ್ ನೀಡಿದ ದೂರಿನ ಮೇಲೆ ಪೊಲೀಸರು ಆರೋಪಿ ಸಾಗರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.