ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು. ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನು ತಿಳಿಸುವ “ಬಾಲ್ಯ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸತ್ಯನಾರಾಯಣಾಚಾರ್ ನಿರ್ಮಾಣದ ಈ ಚಿತ್ರವನ್ನು ವಿ.ಎಂ.ರಾಜು(ಸುಲ್ತಾನ್ ರಾಜು) ನಿರ್ದೇಶಿಸಿದ್ದಾರೆ. ಇತ್ತೀಚಿಗೆ ನಡೆದ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು “ಬಾಲ್ಯ” ದ ಬಗ್ಗೆ ಮಾತನಾಡಿದರು.
ಸುಮಾರು ಒಂದುವರೆ ವರ್ಷಗಳ ಹಿಂದೆ ಈ ಚಿತ್ರದ ಕಥೆ ಸಿದ್ದವಾಯಿತು ಎಂದು ಮಾತನಾಡಿದ ನಿರ್ದೇಶಕ ವಿ.ಎಂ.ರಾಜು, ಬಿ.ಪಟೇಲಪ್ಪ ಅವರು ಸೇರಿದಂತೆ ಅನೇಕ ಸ್ನೇಹಿತರು “ಬಾಲ್ಯ”ದ ಕಥೆಗೆ ಸಾಥ್ ನೀಡಿದ್ದಾರೆ. ಈ ಕಥೆಯನ್ನು ಮೆಚ್ಚಿಕೊಂಡ ಸತ್ಯನಾರಾಯಣಾಚಾರ್ ಅವರು ನಿರ್ಮಾಣ ಮಾಡಲು ಮುಂದಾದರು. ಮಕ್ಕಳಿಗೆ ಆರರಿಂದ ಹದಿನಾಲ್ಕು ವರ್ಷ ಅಮೂಲ್ಯವಾದದ್ದು. ಆ ಸಮಯದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ ಎಂದರು.
ಕನ್ನಡ ಚಿತ್ರರಂಗದ ಮೊದಲ ಪಿ.ಆರ್.ಓ ಸುಧೀಂದ್ರ ನನ್ನ ಗುರು ಸಮಾನರು. ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ನಿರ್ದೇಶಕ ವಿ.ಎಂ.ರಾಜು ತಿಳಿಸಿದರು.ಚಿತ್ರದಲ್ಲಿ ನಟಿಸಿರುವ ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಆರ್ಯನ್, ಮಾಸ್ಟರ್ ದೀಕ್ಷಿತ್, ಕುಮಾರಿ ದೀಕ್ಷ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ಇಂದು ವಿಶ್ವನಾಥ್ ಮಾಹಿತಿ ನೀಡಿದರು.