ಹಿಂದೆ ನಮಗೆ ಹೃದಯಾಘಾತವೆಂಬ ಪದವೇ ವಿರಳವಾಗಿತ್ತು. ನಡು ವಯಸ್ಸಿನ ವ್ಯಕ್ತಿ ಅಥವಾ ವಯಸ್ಸಿನ ವ್ಯಕ್ತಿಗಳಿಗೆ ಆಗುತ್ತಿತ್ತು ಹಾರ್ಟ್ ಅಟ್ಯಾಕ್. ಆದರೆ ಇಂದು ಕಿರಿಯರಿಂದ ಹಿರಿಯರವರೆಗೂ ಹೃದಯಾಘಾತವಾಗುತ್ತಿದೆ. ಮಧ್ಯ ವಯಸ್ಸಿನವರಿಗೆ ಟೆನ್ಷನ್ ತುಂಬಾ ಇರುತ್ತೆ ಕೆಲಸ, ಮನೆ ಹಾಗೂ ಇನ್ನಿತರ ಒತ್ತಡದಿಂದ ಹಾರ್ಟ್ ಅಟ್ಯಾಕ್ ಆಯ್ತು ಎಂದು ಹೇಳುತ್ತಾರೆ.
ಹಲವರು ಚೇತರಿಸಿಕೊಂಡರೆ ಮತ್ತೆ ಕೆಲವರು ಮೃತ ಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹರೆಯದವರು ಮತ್ತು ಸಣ್ಣ ಮಕ್ಕಳು ಇದಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಇದಕ್ಕೆ ಕಾರಣವೇನು ಎನ್ನುವುದು ಯಕ್ಷ ಪ್ರಶ್ನೆಯಂತೂ ಅಲ್ಲ.ಕಳೆದೊಂದು ವರ್ಷದಿಂದ 10 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ಮರಣ ಹೊಂದಿರುವ ಹಲವು ಘಟನೆಗಳು ಕೇಳುವಂತಾಗಿದೆ. ಇಂತಹ ಘಟನೆಗಳನ್ನು ನೋಡಿದಾಗ, ಕೇಳಿದಾಗ ಎಂತಹವರಿಗೂ ಸಂಕಟವಾಗುತ್ತದೆ. ಆಡಿ ಬೆಳೆಯ ಬೇಕಾದ ಮಗು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದರೆ ತಾಯಿ ತಂದೆಯ ಮನಸ್ಥಿತಿ/ಪರಿಸ್ಥಿತಿ ಊಹಿಸಲಾಗದು.
ಸರಿಯಾದ ಆಹಾರವನ್ನು ತಿನ್ನದೆ, ಜಂಕ್ ಫುಡ್ಗಳನ್ನೇ ಹೆಚ್ಚು ತಿನ್ನುತ್ತಾ ಮೊಬೈಲ್, ಲ್ಯಾಪ್ಟಾಪ್ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಮಕ್ಕಳಲ್ಲಿ ಹಾಗೂ ಹದಿ ಹರಯದವರಲ್ಲಿ ಜೀರ್ಣಕ್ರಿಯೆ ಕ್ಷೀಣಿಸುತ್ತದೆ. ರಾತ್ರಿ ತಡವಾಗಿ ಮಲಗುವುದು, ಮೊಬೈಲ್ ಬಳಸುವುದು, ಗೇಮ್ ಆಡುವುದು, ಕಂಪ್ಯೂಟರ್ ಬಳಕೆ ಹೆಚ್ಚಾಗಿ ನಿದ್ರೆಯ ಅವಧಿ ಕಡಿಮೆಯಾಗುತ್ತದೆ. ಶಾಲೆಗೆ ಬೆಳಗ್ಗೆ ಬೇಗ ಏಳುವುದು ಇವೆಲ್ಲವೂ ಕೆಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.
ಇದರೊಂದಿಗೆ ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಬೊಜ್ಜು ಹಾಗೂ ಒತ್ತಡದ ಜೀವನಶೈಲಿ ಸಹ ಮಕ್ಕಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಲು ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಈ ಅಭ್ಯಾಸಗಳ ಬಗ್ಗೆ ಗಮನಹರಿಸಬೇಕು.ಮಕ್ಕಳು ತಿನ್ನುವ ಕೆಲವು ಆಹಾರಗಳಿಂದಲೂ ಸಹ ಸಮಸ್ಯೆ ಹೆಚ್ಚು. ಇಂದಿನ ಮಕ್ಕಳು ಹೆಚ್ಚು ಜಂಕ್ ಫುಡ್ಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ದೈಹಿಕ ಸಾಮರ್ಥ್ಯದ ಬಗ್ಗೆ ಕೂಡಾ ಗಮನ ಹರಿಸಬೇಕು.
ಮಕ್ಕಳಿಗೆ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಬೇಕು. ಅಪರೂಪಕ್ಕೆ ಹೊರಗಿನ ಆಹಾರ ಸೇವಿಸಿದರೆ ಪರವಾಗಿಲ್ಲ ಆದರೆ ಪ್ರತಿದಿನ ತಿನ್ನುವುದರಿಂದ ಮಕ್ಕಳ ದೇಹದಲ್ಲಿ ಬೊಜ್ಜು ಹೆಚ್ಚಾಗಿ ಸ್ಥೂಲಕಾಯ ಸಮಸ್ಯೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಓದಲು, ಹೋಂ ವರ್ಕ್ ಮಾಡಲು ಮಕ್ಕಳಿಗೆ ಒತ್ತಡ ಹಾಕಲಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಮಕ್ಕಳು ಓದು ಬರಹವನ್ನು ಇಷ್ಟಪಟ್ಟು ಮಾಡುವಂತೆ ಮಾಡಬೇಕು. ಕೆಲವು ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ.
ಹೃದಯಾಘಾತವನ್ನು ಮೊದಲೇ ಕಂಡು ಹಿಡಿಯುವುದು ಅಸಾಧ್ಯವಾದ ಮಾತಾಗಿದೆ. ಪೋಷಕರು ಹಾಗೂ ಪಾಲಕರು ಮಕ್ಕಳಿಗೆ ಒಳ್ಳೆಯ ಮಾತುಗಳಿಂದ, ಮುದ್ದು ಮಾತುಗಳಿಂದ ಹೆಚ್ಚು ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಆಹಾರಗಳನ್ನು ಕೊಡಬೇಕು. ಅಳುತ್ತಾರೆ, ಹಠ ಮಾಡುತ್ತಾರೆ ಎಂದು ಯಾವಾಗಲೂ ಜಂಕ್ ಫುಡ್ ಕೊಡಿಸುತ್ತಿದ್ದರೆ ಮತ್ತು ಮೊಬೈಲ್ ವ್ಯಾಮೋಹದಿಂದ ನಿದ್ದೆ ಗೆಟ್ಟರೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೈ ತಪ್ಪುವ ಮುನ್ನ ಎಚ್ಚರವಿರಲಿ. ಕಳೆದು ಹೋದ ಜೀವ ಮರಳಿ ಬಾರದು.
-ಡಾ.ಆರ್.ಶೈಲಜ ಶರ್ಮ, ಬೆಂಗಳೂರು