ಟೆಲ್ ಅವೀವ್: ಹಮಾಸ್ ಉಗ್ರ ದಾಳಿ ಬಳಿಕ ಇಸ್ರೇಲ್ ನಲ್ಲಿ ಕಟ್ಟಡ ಕಾಮಗಾರಿ ಕೆಲಸದಲ್ಲಿದ್ದ ಪ್ಯಾಲೆಸ್ಟೀನಿಯನ್ನರನ್ನು ದೇಶದಿಂದ ಹೊರಹಾಕಲಾಗಿದ್ದು, ಇದೀಗ ಅವರ ಸ್ಥಾನಕ್ಕೆ ಭಾರತದಿಂದ ಬರೊಬ್ಬರಿ 16 ಸಾವಿರ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದೆ.
ಹೌದು.. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭೀಕರ ಉಗ್ರ ದಾಳಿಯ ನಂತರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರ ತೆರವಿನ ಬಳಿಕ ಉಂಟಾದ ಕಾರ್ಮಿಕರ ಕೊರತೆಯನ್ನು ನೀಗಿಸಲು ಇದೀಗ ಇಸ್ರೇಲ್ ಸರ್ಕಾರ ಭಾರತದ ಮೊರೆ ಹೋಗಿದ್ದು, ಇದೀಗ ಭಾರತದಿಂದ ಸುಮಾರು 16 ಸಾವಿರ ಕಾರ್ಮಿಕರನ್ನು ಇಸ್ರೇಲ್ ಕರೆಸಿಕೊಂಡಿದೆ.
ಹಮಾಸ್ ಅಂದು ಆ ದಾಳಿ ನಡೆಸದೇ ಇದಿದ್ದರೆ, ಇಸ್ರೇಲ್ ನಲ್ಲಿ ನಿಧಾನವಾಗಿ ಹೊರಹೊಮ್ಮುತ್ತಿರುವ ಎತ್ತರದ ಗೋಪುರಗಳು, ಮನೆಗಳು, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳೊಂದಿಗೆ ಈ ಸ್ಥಳವು ಅರೇಬಿಕ್ ಮಾತನಾಡುವ ಕಾರ್ಮಿಕರಿಂದ ತುಂಬಿರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದ್ದು, ಇದೀಗ ಇಲ್ಲಿ ಹಿಂದಿ, ಹೀಬ್ರೂ ಮತ್ತು ಮ್ಯಾಂಡರಿನ್ ಭಾಷೆಗಳನ್ನಾಡುವ ಕಾರ್ಮಿಕರು ಹೆಚ್ಚಾಗಿ ಕಾಣತೊಡಗಿದ್ದಾರೆ.
ಹಮಾಸ್ ದಾಳಿಯು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಇದುವರೆಗಿನ ಅತ್ಯಂತ ಮಾರಕ ಯುದ್ಧವನ್ನು ಪ್ರಾರಂಭಿಸಿತು. ನಂತರ ಇದು ಲೆಬನಾನ್ನ ಹಿಜ್ಬೊಲ್ಲಾ ಮತ್ತು ಯೆಮೆನ್ನ ಹುತಿ ಬಂಡುಕೋರರು ಸೇರಿದಂತೆ ಇತರ ಇರಾನ್ ಬೆಂಬಲಿತ ಗುಂಪುಗಳಿಗೆ ಹರಡಿತು ಮತ್ತು ಇಸ್ಲಾಮಿಕ್ ಗಣರಾಜ್ಯದೊಂದಿಗೆ ನೇರ ಮುಖಾಮುಖಿಯಾಯಿತು.