ದೊಡ್ಡಬಳ್ಳಾಪುರ: ವರಕವಿ ದ.ರಾ.ಬೇಂದ್ರೆ ಅವರು ಜನಸಾಮಾನ್ಯರ ನೋವು-ನಲಿವುಗಳನ್ನು, ಚೆಲುವು-ಒಲವುಗಳನ್ನು ತಮ್ಮ ಕವನಗಳಲ್ಲಿ ಮೂಡಿಸಿದರು. ಅವರಿಗೆ ಜೀವನವೇ ಕಾವ್ಯ, ಕಾವ್ಯವೇ ಜೀವನವಾಗಿತ್ತು ಎಂದು ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ನಡೆದ ವರಕವಿ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಭಾಷೆಯ ಪದ ಸಂಪತ್ತು ಮತ್ತು ನಾದ ಸಂಪತ್ತು ಎರಡನ್ನೂ ಬಳಸುವ ಮೂಲಕ ಬೇಂದ್ರೆಯವರ ತಮ್ಮ ಕಾವ್ಯಗುಣದ ಸತ್ವವನ್ನು ಉನ್ನತಮಟ್ಟಕ್ಕೆ ಏರಿಸಿದವರು. ಇಂದರಿಂದಾಗಿ ಬೇಂದ್ರೆಯವರ ಕವಿತೆಗಳು ಸಹೃದಯರ ಮನಸ್ಸನ್ನು ಆರ್ಕಷಣೆಗೊಳಿಸಿವೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ದ.ರಾ.ಬೇಂದ್ರೆ ಅವರು ಪ್ರಕೃತಿಯ ವರ್ಣನೆಗಳಿಂದ ಹಿಡಿದು ಸಾಮಾಜಿಕ ಪ್ರಜ್ಞೆಯ ವರ್ಣನೆಯ ತನಕ ಎಲ್ಲಾ ವಿಚಾರಗಳನ್ನು ಕವಿತೆಗಳಲ್ಲಿ ತಂದ ಮಹಾನ್ ಚೇತನ. ಶಬ್ದಗಾರುಡಿಗಾರ ಬೇಂದ್ರೆ ತಮ್ಮ ಕವಿತೆಗಳ ಮೂಲಕ ಹೊಸಗನ್ನಡ ಕಾವ್ಯಕ್ಕೆ ಹೊಸತನ ನೀಡಿದರು ಎಂದರು.
ನಾಗದಳ ಸಂಘಟನೆಯ ನಟರಾಜು ಮಾತನಾಡಿ, ಬೇಂದ್ರೆ ಅವರ ಕಾವ್ಯದಲ್ಲಿ ದೇಸಿ ಸೊಗಡು, ಪ್ರಕೃತಿ, ಆಧ್ಯಾತ್ಮಿಕತೆಯ ಜೊತೆಗೆ ಸಾಮಾನ್ಯ ಮನುಷ್ಯ ಜೀವನದ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಬಿಂಬಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.
ಗೋವಿಂದರಾಜು, ಕಸಬಾ ಹೋಬಳಿ ಘಟಕ ಅಧ್ಯಕ್ಷದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ನಾಗರತ್ನಮ್ಮ, ಷಪೀರ್, ಕೋದಂಡರಾಮ್, ಎ.ಅಣ್ಣಯ್ಯ, ಕಲಾವಿದರುಗಳಾದ ದರ್ಗಾಜೋಗಿ ಹಳ್ಳಿ ಮಲ್ಲೇಶ್, ಎಂ.ರಾಮಕೃಷ್ಣ, ಪತ್ರಕರ್ತ ಮಂಜುನಾಥ ಮೊದಲಾದವರು ಭಾಗವಹಿಸಿದ್ದರು.