ಕನಕಪುರ: ನಗರದ ಕೃಷ್ಣ ಸಾಗರ್ ಹೋಟೆಲ್ ಸಭಾಂಗಣದಲ್ಲಿ ನಡೆದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಗಿರೀಶ್ ಎಸ್. ವಿ. ರವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ರವರು ಗಿರೀಶ್ ರವರಿಗೆ ಶಾಲು ಹೊದಿಸಿ ಪುಸ್ತಕ ನೀಡಿ ಸನ್ಮಾನಿಸಿದರು.
ನಂತರ ಮಾತನಾಡಿದ ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಪತ್ರಕರ್ತರು ನಮ್ಮ ನೆಲ- ಜಲ- ಭಾಷೆಯನ್ನು ಕಾಪಾಡುವ ಜೊತೆಗೆ ಸಮಾಜದ ಡೊಂಕನ್ನು ತಿದ್ದುವ ಕೆಲಸ ಮಾಡುತ್ತಾರೆ, ಗಿರೀಶ್ ರವರು ನಮ್ಮಂತಹ ಸಂಘಟನೆಗಳು ನಡೆಸುವ ಪ್ರತಿಭಟನೆಗಳ ಸುದ್ದಿ ಮಾಹಿತಿಗಳನ್ನು ಸಕಾಲದಲ್ಲಿ ಜನತೆಗೆ ತಲುಪಿಸುತ್ತಿದ್ದಾರೆ, ಇಂತಹ ಪತ್ರಕರ್ತರನ್ನು ಸರ್ಕಾರ ಗುರುತಿಸಿ ಗೌರವ ಸೂಚಿಸಬೇಕು ಎಂದು ತಿಳಿಸುತ್ತಾ ಪತ್ರಕರ್ತರಾದ ಗಿರೀಶ್ ರವರಿಗೆ ಶುಭ ಹಾರೈಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಸಿ ವೆಂಕಟೇಶ್ ಮಾತನಾಡಿ, ನಮ್ಮ ಕನಕಪುರ ತಾಲ್ಲೂಕಿನ ಅಧ್ಯಕ್ಷ ರಾದ ಗಿರೀಶ್ ರವರು ಎಲ್ಲರನ್ನೂ ಸಮಾನವಾಗಿ ನೋಡುವ ಗುಣ ಹೊಂದಿದ್ದು, ಪತ್ರಕರ್ತರ ಕಷ್ಟ ಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಇಂತಹ ಅಧ್ಯಕ್ಷರು ಇನ್ನು ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ವಿವಿಧ ಸಂಘಟನೆಗಳ ಮುಖಂಡರುಗಳಾದ ಹೊಸದುರ್ಗ ಪ್ರಶಾಂತ್, ನಲ್ಲಹಳ್ಳಿ ಶ್ರೀನಿವಾಸ್, ಸುರೇಶ್, ಭಾಸ್ಕರ್, ಅಸ್ಗರ್ ಖಾನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



