ದೊಡ್ಡಬಳ್ಳಾಪುರ: ರಸ್ತೆ ಗುಂಡಿಗಳನ್ನು ಮುಚ್ಚದೇ ಇರುವ ಬಗ್ಗೆ ಪ್ರತಿನಿತ್ಯವೂ ಪತ್ರಿಕೆಗಳಲ್ಲಿ ವರದಿ ಬರುತ್ತಿವೆ. ಈ ಬಗ್ಗೆ ಸೂಚನೆ ನೀಡಿ ಮೂರು ತಿಂಗಳು ಕಳೆದರೂ ರಸ್ತೆ ಗುಂಡಿಗಳನ್ನ ಮುಚ್ಚದೆ ಇದ್ದರೆ ಜನರಿಗೆ ಉತ್ತರ ನೀಡಿವುದಾದರು ಹೇಗೆ ಎಂದು ಶಾಸಕ ಧೀರಜ್ ಮುನಿರಾಜ್ ಲೋಕೋಪಯೋಗಿ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಣ ನೀಡಿದ್ದರು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಗುಂಡಿ ಮುಚ್ಚದೇ ಇದ್ದರೆ ಜನರ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು. ಅಧಿಕಾರಿಗಳ ಈ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ.
ಈಗಷ್ಟೇ ಮಳೆಗಾಲ ಮುಕ್ತಾಯವಾಗಿದೆ ಕಾಲಮಿತಿಯೊಳಗೆ ನಗರಸಭೆ ವ್ಯಾಪ್ತಿಯ ರಸ್ತೆಗಳುಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿನ ಗುಂಡಿ
ಗಳನ್ನು ತುರ್ತಾಗಿ ಮುಚ್ಚಬೇಕು. ಇದರಿಂದ ಜೀವಹಾನಿಯಾದರೆ ಯಾರು ಹೋಣೆ ಎಂದು ಪ್ರಶ್ನಿಸಿದರು.87 ಲಕ್ಷ ವಿದ್ಯುತ್ ಬಿಲ್ ಬಾಕಿ: ನಗರದಲ್ಲಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಆಸ್ಪತ್ರೆ ಹಾಗೂ ಡಾ.ರಾಜ್ಕುಮಾರ್ ವೃತ್ತದ ಸಮೀಪದಲ್ಲಿನ ಸಾರ್ವಜನಿಕ ನಗರ ವ್ಯಾಪ್ತಿಯ ಆಸ್ಪತ್ರೆಯ ವಿದ್ಯತ್ ಬಿಲ್ ಒಂದು ವರ್ಷದಿಂದಲೂ ಪಾವತಿಸಿಲ್ಲ. ಈಗ ರೂ.87 ಲಕ್ಷಕ್ಕೆ ಏರಿಕೆಯಾಗಿದೆ.
ಆಸ್ಪತ್ರೆ ನಿರ್ವಹಣೆಗೆ ಸರ್ಕಾರದಿಂದ ಸೂಕ್ತ ಹಣ ಮಂಜೂರಾಗಿದೆ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಆಸ್ಪತ್ರೆಯ ವಿದ್ಯುತ್ ಸರಬರಾಜು ಕಡಿತ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದರು.ವಿದ್ಯುತ್ ಬಿಲ್ ಪಾವತಿ ಹಾಗೂ ಆಸ್ಪತ್ರೆ ನಿರ್ವಹಣೆಗೆ ಅಗತ್ಯ ಅನುದಾನ ನೀಡುವಂತೆ ವಿಧಾನಸಭಾ ಅಧಿವೇಶನ. ದಲ್ಲಿ ಆರೋಗ್ಯ ಸಚಿವರನ್ನು ಪ್ರಶ್ನಿಸಲಾಗುತ್ತಿದೆ ಎಂದರು.
ವೈದ್ಯರ ಕೊರತೆ: ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಈ ಬಗ್ಗೆ ಅರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.ಕೃಷಿ ಇಲಾಖೆಯ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ಇಲ್ಲದೆ ಸರ್ಕಾರದ ಸೌಲಭ್ಯಗಳು ರೈತರಿಗೆ ತಲುಪುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಅಧಿಕಾರಿಗಳನ್ನು ಭೇಟಿ ಮಾಡುವ ಸಮಯವನ್ನು ಸೂಚನ ಫಲಕದಲ್ಲಿ ಬರೆಯಬೇಕು. ಇತ್ತೀಚಿನ ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ರೈತರಿಗೆ ಲಭ್ಯ ಇರುವುದೆ ಅಪರೂಪವಾಗಿದೆ ಎಂದರು.
ನಗರೋತ್ಥಾನ ಯೋಜನೆಯ ಅನುದಾನ ವಿಳಂಬಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಎಸ್ಇಪಿ, ಟಿಎಸ್ಪಿಗೆ ಅನುದಾನ ಬಳಕೆಯಾಗಬೇಕು. ಕಾಮ ಗಾರಿಗಳನ್ನು ವಿಳಂಬ ಮಾಡಬೇಡಿ ಎಂದು ಶಾಸಕರು ಸೂಚಿಸಿದರು.ತಲೆಮರೆಸಿಕೊಂಡ ಗುತ್ತಿಗೆದಾರರು: ತಾಲ್ಲೂಕಿನಲ್ಲಿ 245 ಶುದ್ದ ಕುಡಿಯುವ ನೀರಿನ ಘಟಕಗಳು ಇವೆ. ಇವುಗಳ ಪೈಕಿ 20 ಘಟಕಗಳು ದುರಸ್ತಿಯಾಗಿದೆ ಕೆಟ್ಟು ನಿಂತಿವೆ. ಇವುಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ಸೂಚನೆ ನೀಡಿದ್ದರು ಸಹ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ. 20 ಘಟಕಗಳ ಗುತ್ತಿಗೆದಾರರು ತಲೆಮರೆಸಿಕೊಂಡಿದ್ದಾರೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ರಾಜಣ್ಣ ಹೇಳಿದರು.
ಇದರಿಂದ ಅಸಮಧಾನಗೊಂಡ ಶಾಸಕ ಧೀರ್ಮುನಿರಾಜ್, ಸೌಲಭ್ಯಗಳಲ್ಲಿ ಅತ್ಯಂತ ಮುಖ್ಯವಾಗಿರುವ ಶುದ್ಧ ಕುಡಿಯುವ ನೀರನ್ನು ಜನರಿಗೆ ನೀಡಲು ಸಾಧ್ಯವಾಗದ ಅಧಿಕಾರಿಗಳು ಇರುವ ಅವಶ್ಯಕತೆ ಇಲ್ಲ. ಸಭೆಗಳಲ್ಲಿ ನೀಡುವ ಸೂಚನೆ ಪಾಲಿಸದ ಅಧಿಕಾರಿಗಳಿಂದ ಜನಪರ ಆಡಳಿತ ನಿರೀಕ್ಷೆ ಮಾಡುವುದಾದರು ಹೇಗೆ ಎಂದು ಪ್ರಶ್ನಿಸಿದರು.ತಲೆಮರಿಸಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತ ಕೂರುವುದರಲ್ಲಿಯೇ ನಾಲ್ಕು ತಿಂಗಳಿಂದ ಕಾಲಾಹರಣ ಮಾಡಲಾಗಿದೆ. ಕುಡಿಯುವ ನೀರು ಇಲ್ಲದೆ ಜನರು ಹೇಗೆ ಜೀವನ ಮಾಡಬೇಕು. ಕುಡಿಯುವ ನೀರು ಕೊಡಲು ಸಾಧ್ಯವಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗುತ್ತಿಗೆ ಡಿಸೆಂಬರ್ನಲ್ಲಿ ಮುಕ್ತಾಯವಾಗುತ್ತಿವೆ. ಇವುಗಳನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಿಸಿ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಡಲಾಗುವುದು ಎಂದರು.ಮದ್ಯಮುಕ್ತ ಗ್ರಾಮ ಮಾಡಿ: ತಾಲ್ಲೂಕಿನ ಹಳೇಕೋಟೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರುಗಳು ಬಂದಿವೆ. ಅಬಕಾರಿ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು. ಮದ್ಯ ಮಾರಾಟ, ಅಬಕಾರಿ ನಿಯಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು 1ನೇ ಹಾಗೂ 3ನೇ ಶನಿವಾರ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಬೇಕು. ಆಯೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಸಹ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಸಲಹೆ ನೀಡಿದರು.ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಇದ್ದರು.