ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸದ ಪುಟಗಳಲ್ಲಿ ದಾಖಲೆ ಸೃಷ್ಟಿಸಲು ಕಾರಣಕರ್ತರಾದ ಸಮಿತಿಯ ಸದಸ್ಯರಿಗೆ ಪ್ರಶಂಸಾರ್ಹ ಅಭಿನಂದನಾ ಪತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ನೀಡಿ ಅಭಿನಂದಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಮಾನತೆ, ಐಕ್ಯತೆ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ಬಿಂಬಿಸುವ ಐತಿಹಾಸಿಕ ಮಾನವ ಸರಪಳಿ ರಚನೆ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ ಜಗತ್ತಿನ ಅತಿ ಉದ್ದದ ಬೀದರ್ ನಿಂದ ಚಾಮರಾಜನಗರದವರೆಗೂ 31 ಜಿಲ್ಲೆಗಳನ್ನೊಳಗೊಂಡ 2,500 ಕಿ.ಮೀ ಉದ್ದದ ಮಾನವ ಸರಪಳಿಯನ್ನು (ಸೌಹಾರ್ದ ಸರಪಳಿಯನ್ನು) ಕರ್ನಾಟಕ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಇಚ್ಛೆಯಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ ಸಿ ಮಹಾದೇವಪ್ಪರವರು ಬಯಸಿದಂತೆ ಮತ್ತು ಸಮಾಜ ಕಲ್ಯಾಣ ಇಲಾಖೆ,
ಕರ್ನಾಟಕ ಸರ್ಕಾರ ಸಹಕಾರದಿಂದ ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಅಭೂತಪೂರ್ವ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಲು ಕಾರಣಕರ್ತರಾದವರಿಗೆ ನಗರದ ಐಎಎಸ್ ಆಫೀಸರ್ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕೊಟ್ಟಂತಹ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ, ದಲಿತ ಸಂಘಟನೆಗಳ ಮುಖಂಡರಿಗೆ, ನಾಗರೀಕರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ವಿವಿಧ ಇಲಾಖೆಗಳ ಆಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಮಿತಿಯ ಸದಸ್ಯರಿಗೆ, ವಿವಿಧ ಸಂಘಟನೆಗಳ ಸದಸ್ಯರಿಗೆ ಮತ್ತಿತರ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ದಲಿತ ಸಂಘರ್ಷ ಸೇನೆ ರಾಜ್ಯಾಧ್ಯಕ್ಷ ಎಂ. ಲಿಂಗರಾಜು, ಸೌಹಾರ್ದ ಟ್ರಸ್ಟ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಐಎನ್ ಟಿಯುಸಿ ಅಧ್ಯಕ್ಷ ರ. ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತೆ ಎಂ. ನಾಗಮಣಿ, ಐಎನ್ ಟಿಯುಸಿ ರಾಜ್ಯ ಕಾರ್ಯದರ್ಶಿಎಂ. ನಂಜಪ್ಪ ಮತ್ತಿತರಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅಭಿನಂದನಾ ಪತ್ರವನ್ನು ನೀಡಿ ಅಭಿನಂದಿಸಿದರು.