ಬೆಂಗಳೂರು: ಅಶ್ಲೀಲ ವಿಡೀಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶಕ್ಕೆ ಹಾರಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ತುದಿಗಾಲಲ್ಲಿ ನಿಂತಿರುವ ವಿಶೇಷ ತನಿಖಾ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದೆ.
ಕಳೆದೆರಡು ದಿನಗಳಿಂದ ಪ್ರಜ್ವಲ್ ರೇವಣ್ಣ ದುಬೈನಲ್ಲಿದ್ದಾರೆ. ಇಂದು ಬರುತ್ತಾರೆ.. ನಾಳೆ ಬರುತ್ತಾರೆ ಎಂಬ ವ್ಯಾಪಕ ವದಂತಿಗಳ ನಡುವೆ ಎಸ್ಐಟಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಮಾನ ನಿಲ್ದಾಣದ ಸುತ್ತ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.ಪ್ರಜ್ವಲ್ ಸ್ವದೇಶಕ್ಕೆ ಬಂದ ಕೂಡಲೇ ಕಂಡಲ್ಲಿ ಅವರನ್ನು ಬಂಧಿಸಲು ಬ್ಲೂಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬರಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು.
ಇಂದು ಸಹ ಪ್ರಜ್ವಲ್ ಬೆಂಗಳೂರಿಗೆ ಬರುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ. ಆತ ಬಂದರೆ ಬಂಧಿಸಲು ಎಸ್ಐಟಿ ಪಡೆ ಸರ್ವಸನ್ನದ್ಧವಾಗಿ ಸಜ್ಜಾಗಿದೆ.
ವಿದೇಶಗಳಿಂದ ಬರುವ ವಿಮಾನ ಪ್ರಯಾಣಿಕರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ದುಬೈ ಮತ್ತು ಮಸ್ಕತ್ ಮತ್ತಿತರ ದೇಶಗಳಿಂದ ಬರುವ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಇದೇ ಪ್ರಕರಣ ಮತ್ತು ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ತಂದೆ ಮತ್ತು ಶಾಸಕ ಹೆಚ್ ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.