ಬೆಂಗಳೂರು: ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್) ಹೊರತುಪಡಿಸಿ ನಗರದ ಬೇರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸಲು ಅನುಮತಿ ನೀಡದಂತೆ ಜಾರಿಗೊಳಿಸಲಾಗಿರುವ ‘ಪ್ರತಿಭಟನೆ, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ ನಿಯಮʼ 2021 ನ್ನು ಹಿಂಪಡೆಯಬೇಕು ಎಂದು ವಿವಿಧ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಒಂದು ಕಾಲದಲ್ಲಿ ಬೆಂಗಳೂರಿನಾದ್ಯಂತ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಾಗಿದ್ದ ಪ್ರತಿಭಟನೆಗಳು ಈಗ ಫ್ರೀಡಂ ಪಾರ್ಕ್ಗೆ ಮಾತ್ರ ಸಿಮೀತಗೊಳಿಸಲಾಗಿದೆ. ರಾಜ್ಯದೊಂದಿಗಿನ ಯಾವುದೇ ಮಾತುಕತೆಯನ್ನು ಪರಿಣಾಮಕಾರಿಯಾಗಿ ನಡೆಸದಂತೆ ಮೌನಗೊಳಿಸಿದೆ ಎಂದು ಜನಾಂದೋಲನದ ಪ್ರತಿನಿಧಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿಯ ಜಂತರ್ ಮಂತರ್ ಪ್ರತಿಭಟನೆಗೆ ಸ್ಮಶಾನವಾಗಿದೆ. ಅದೇ ರೀತಿ ಬೆಂಗಳೂರಿನ ಫ್ರೀಡಂ ಪಾರ್ಕ್ ಮಾಡಬಾರದು. ಪ್ರತಿಭಟನೆಗಳನ್ನು ನಿರ್ಬಂಧಿಸುವ ಬದಲು ಟ್ರಾಫಿಕ್ ಪರಿಹಾರಗಳು ಮತ್ತು ಉತ್ತಮ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಎಂದು ಬರಹಗಾರ ಮತ್ತು ಚಿಂತಕ ಆಕರ್ ಪಟೇಲ್ ಅಧಿಕಾರಿಗಳನ್ನು ಒತ್ತಾಯಿಸಿದರು.
ನ್ಯಾಯಾಧೀಶರು ಕಾಮಪ್ರಚೋದಕ ಕಾಮೆಂಟ್ ಮಾಡಿದಾಗ, ನ್ಯಾಯಕ್ಕಾಗಿ ನಾವು ಎಲ್ಲಿಗೆ ಹೋಗುತ್ತೇವೆ? ಎಂದು ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ವ್ಯವಸ್ಥಿತ ದಬ್ಬಾಳಿಕೆಯನ್ನು ಪ್ರಶ್ನಿಸಲು ಸಾರ್ವಜನಿಕ ಪ್ರತಿಭಟನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.