ದೇವನಹಳ್ಳಿ : ಪ್ರತಿಯೊಬ್ಬರೂ ಶೌಚಾಲಯಗಳನ್ನು ನಿರ್ಮಿಸಿ ಶುಚಿತ್ವವನ್ನು ಕಾಪಾಡಿಕೊಳ್ಳಿ ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆದು ರೋಗಗಳಿಂದ ದೂರವಿರಿ ಎಂದು ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಟಿ.ಕೆ. ರಮೇಶ್ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಲಹೆ ನೀಡಿದರು.
ಅವರು ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಕುಂದಾಣ ಗ್ರಾಪಂ ಸಹಯೋಗದೊಂದಿಗೆ ವಿಶ್ವ ಶೌಚಾಲಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿ, ನೈರ್ಮಲ್ಯದಿಂದ ಕಾಪಾಡಬೇಕು.
ನೈರ್ಮಲ್ಯ ಕಾಪಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರೂ ಬಯಲು ಶೌಚ ಮಾಡುವುದನ್ನು ಬಿಟ್ಟು ಮನೆ ಶೌಚಾಲಯಗಳನ್ನು ಬಳಸುವ ಜತೆಗೆ ಸುತ್ತ ಮುತ್ತಲಿನ ಜನರು ಶೌಚಾಲಯ ಬಳಸುವಂತೆ ಪ್ರೇರಣೆ ತುಂಬಬೇಕು, ಪ್ರತಿಯೊಬ್ಬರೂ ಸಾರ್ವಜನಿಕ ಶೌಚಾಲಯಗಳನ್ನು ನಮ್ಮ ಮನೆ ಶೌಚಾಲಯಗಳಂತೆ ಬಳಸಿಕೊಂಡ ಬಯಲು ಶೌಚ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ನಿಮ್ಮ ಮನೆಯ ತ್ಯಾಜ್ಯ ನೀರನ್ನು ಬೂಮಿಗೆ ಇಂಗುವಂತೆ ಮಾಡಿ, ಇದು ಸಾರ್ವಜನಿಕರ ಜವಾಬ್ದಾರಿ.
ಜಿಲ್ಲೆಯ 101 ಪಂಚಾಯ್ತಿಗಳ ಪೈಕಿ 84 ಪಂಚಾಯ್ತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ, ನಿಮ್ಮ ಮನೆಯ ತ್ಯಾಜ್ಯಗಳನ್ನು ಪಂಚಾಯ್ತಿ ವಾಹನಗಳಿಗೆ ನೀಡಿ, ನಿಮ್ಮ ಮನೆಗಳ ಸುತ್ತ ಸ್ವಚ್ಚವಾಗಿಡಿ, ಎಲ್ಲೆಂದರಲ್ಲಿ ಕಸ ಹಾಕಬೇಡಿ, ಕಸದ ಬುಟ್ಟಿಯಲ್ಲಿಯೇ ಹಾಕಿ, ನಿಮ್ಮ ಗ್ರಾಮ ಸ್ವಚ್ಚ ಗ್ರಾಮವನ್ನಾಗಿ ಮಾಡಿ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನವೆಂಬರ್ 19 ರಿಂದ ಡಿಸೆಂಬರ್ 10 ರವರೆಗೆ ನಡೆಯುವ ವಿಶ್ವ ಶೌಚಾಲಯ ದಿನದ ಅಂಗವಾಗಿ “ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನ” ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ದ್ಯಾವರಹಳ್ಳಿ ಶಾಂತಕುಮಾರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು, ಈ ವೇಳೆ ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವನಹಳ್ಳಿ ತಾ.ಪಂ ಇ.ಒ ಶ್ರೀನಾಥಗೌಡ ಅವರು ಶೌಚಾಲಯ ಬಳಕೆ ಹಾಗೂ ನೈರ್ಮಲ್ಯ ಕಾಪಾಡುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಜಿ.ಪಂ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲಕುಮಾರ್, ಉಪ ತಹಸೀಲ್ದಾರ್ ಚೈತ್ರ, ರಾಜಸ್ವ ನಿರೀಕ್ಷಕ ಹನುಮಂತರಾಯಪ್ಪ, ಜಿಲ್ಲಾ ಕುಂದಾಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ನಾಗೇಶ್, ಸದಸ್ಯರಾದ ಕ್ಯಾತೇಗೌಡ, ಕೆ.ವಿ.ಸ್ವಾಮಿ, ವೀಣಾರಾಣಿ, ರಾಮಚಂದ್ರಪ್ಪ, ಕುಂದಾಣ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕುಮಾರ್, ಶಾಂತಕುಮಾರ್, ವರಲಕ್ಷ್ಮೀ, ಮುನಿಯಪ್ಪ, ಸುಬ್ರಮಣಿ, ಮುಖಂಡ ಗಣೇಶ್, ಚಂದ್ರಪ್ಪ, ಮುಖ್ಯ ಶಿಕ್ಷಕಿ ಶಾಂತಲಾ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.