ಬೆಂಗಳೂರು: ದಿನ ಕಳೆಯುತ್ತಿದ್ದಂತೆ ನಗರದಲ್ಲಿ ಜೀವನ ದುಬಾರಿಯಾಗುತ್ತಿದೆ. ತಿನ್ನುವ ಅನ್ನದಿಂದ ಹಿಡಿದು ಧರಿಸೋ ಚಪ್ಪಲಿವರೆಗೂ ಎಲ್ಲವೂ ತುಟ್ಟಿಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ತರಕಾರಿ ದರವೂ ಗಗನಕ್ಕೆ ಮುಟ್ಟಿದೆ. ಇದರ ಜೊತೆಗೆ ಕಸದ ಹೆಸರಲ್ಲಿ ಬೆಂಗಳೂರಿಗರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಜ್ಜಾಗುತ್ತಿದೆ.
ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರಿಗೆ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ಸೆಸ್ ವಿಧಿಸಲು ಪಾಲಿಕೆ ಮುಂದಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಅಪಾರ್ಟ್ಮೆಂಟ್ಗಳು, ಹೋಟೆಲ್ಗಳು ಮತ್ತು ಮಾಲ್ಗಳು ಪ್ರತಿನಿತ್ಯ 100 ಕೆಜಿಗೂ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸಿ ಬಿಬಿಎಂಪಿಯ ಕಾಂಪ್ಯಾಕ್ಟರ್ಗಳಿಗೆ ಕಳುಹಿಸುತ್ತಿವೆ. ಇದರಿಂದ ಕಸ ಸಂಗ್ರಹ ವ್ಯವಸ್ಥೆಯ ಮೇಲೆ ಹೊರೆ ಹೆಚ್ಚುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಉದ್ದೇಶಿತ ಸೆಸ್ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದು ಹೇಳಿದರು.
ಘನತ್ಯಾಜ್ಯ ವಿಲೇವಾರಿ ನಿಯಮದ ಪ್ರಕಾರ ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು ಬಿಬಿಎಂಪಿ ಜವಾಬ್ದಾರಿಯಾಗಿದೆ. ಆದರೆ, ನಗರದಲ್ಲಿ ಅನಧಿಕೃತವಾಗಿ ಹೋಟೆಲ್ಗಳು ಸೇರಿದಂತೆ ಸಗಟು ತ್ಯಾಜ್ಯ ಉತ್ಪಾದಕರು ಬಿಬಿಎಂಪಿಗೆ ತಮ್ಮ ಕಸ ಹಾಕುತ್ತಿದ್ದಾರೆ. ಇದರಿಂದ ಬಿಬಿಎಂಪಿಗೆ ಕಸ ವಿಲೇವಾರಿ ಹೆಚ್ಚಾಗಿ ಸಮಸ್ಯೆ ಆಗುತ್ತಿದೆ.
6 ತಿಂಗಳ ಹಿಂದೆಯೇ ನಗರದ ಸಗಟು ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ನೀಡಿ ತಮ್ಮಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಲಾಗಿತ್ತು. ಆದರೆ, ಈವರೆಗೆ ಸಗಟು ತ್ಯಾಜ್ಯ ಉತ್ಪಾದಕರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಸ್ವಂತ ವ್ಯವಸ್ಥೆ ಮಾಡಿಕೊಳ್ಳದವರೆಗೆ ಸಗಟು ತ್ಯಾಜ್ಯ ಉತ್ಪಾದಕರಿಂದ ಕಸ ಸಂಗ್ರಹಿಸುವುದಕ್ಕೆ ಪ್ರತಿ ಕೆ.ಜಿ. ರೂ.12 ದರ ನಿಗದಿ ಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಹೋಟೆಲ್, ಅಪಾರ್ಟ್ ಮೆಂಟ್ ಸಂಕೀರ್ಣ, ಕೈಗಾರಿಕೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆಯ ಈ ಕ್ರಮಕ್ಕೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ಸ್ (ಬಿಬಿಎಚ್ಎ) ಆಘಾತ ವ್ಯಕ್ತಪಡಿಸಿದೆ. ಈ ಹಿಂದೆ ಪ್ರತಿ ಕೆಜಿ ತ್ಯಾಜ್ಯಕ್ಕೆ 50 ಪೈಸೆ ವಿಧಿಸಲಾಗುತ್ತಿತ್ತು. ಪ್ರಸ್ತಾವಿತ ಸೆಸ್ ಜಾರಿಗೆ ಬಂದರೆ, ಸಣ್ಣ ಹೋಟೆಲ್ ಮಾಲೀಕರು ಪ್ರತಿ ತಿಂಗಳು 35,000 ರೂ ಪಾವತಿಸಬೇಕಾಗುತ್ತದೆ. ಪಾಲಿಕೆ ಕೂಡಲೇ ಸಂಬಂಧಪಟ್ಟವರೊಂದಿಗೆ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ.
ನಮ್ಮ ಸಂಘವು 2,000 ಸದಸ್ಯರನ್ನು ಹೊಂದಿದ್ದು, ಬುಧವಾರ ಸಭೆ ನಡೆಸಲಿದ್ದೇವೆ. ಸಭೆಯ ನಂತರ ಸರ್ಕಾರ ಮತ್ತು ಬಿಬಿಎಂಪಿಗೆ ನಮ್ಮ ಒತ್ತಾಯವನ್ನು ಮುಂದಿಡಲಾಗುವುದು ಎಂದು ಬಿಬಿಎಚ್ಎ ಅಧ್ಯಕ್ಷ ಪಿ.ಸಿ.ರಾವ್ ಅವರು ಹೇಳಿದ್ದಾರೆ.