ಬೆಂಗಳೂರು: ಕರ್ನಾಟಕದ ಮುತ್ಸದ್ಧಿ ರಾಜಕಾರಣಿ, ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂಬ ಶ್ರೇಯಸ್ಸು ದೊರೆಯುವಂತೆ ಮಾಡಿದ ನಾಡು ಕಂಡ ಧೀಮಂತ ರಾಜಕಾರಣಿ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಯಿತು. ಸಚಿವರು, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಹಲವು ಹುದ್ದೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಕರ್ನಾಟಕದಲ್ಲಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವಾರು ಸಂದರ್ಭದಲ್ಲಿ ಅವರ ಮಾರ್ಗದರ್ಶನವನ್ನು ನಾನು ಪಡೆದಿದ್ದೇನೆ. ಕೃಷ್ಣ ಅವರು ಶಾಸ್ತ್ರೀಯ ಸಂಗೀತಾಸ್ತಕರಾಗಿದ್ದರು. ಪ್ರತಿ ವರ್ಷ ಚಾಮರಾಜಪೇಟೆಯಲ್ಲಿ ನಡೆಯುತ್ತಿದ್ದ ಸಂಗೀತೋತ್ಸವಕ್ಕೆ ದಂಪತಿ ಸಮೇತ ಬಂದು ಸಂಗೀತ ಆಲಿಸುತ್ತಿದ್ದರು. ಲಾನ್ ಟೆನಿಸ್ ಬಗ್ಗೆ ವಿಶೇಷ ವ್ಯಾಮೋಹ ಹೊಂದಿದ್ದ ಕೃಷ್ಣ ಅವರು ಬ್ಯಾಡ್ಮಿಂಟನ್ ಪ್ರಿಯರಾಗಿದ್ದು, ಪ್ರತಿ ದಿನವೂ ಆಡುತ್ತಿದ್ದುದು ಕಂಡಿದ್ದೇವೆ ಎಂದು ಸ್ಪರಿಸಿದರು.
ಎಸ್.ಎಂ.ಕೃಷ್ಣ ಅವರ ನಿಧನದಿಂದ ವೈಯಕ್ತಿಕವಾಗಿ ಅಪಾರ ದುಃಖವಾಗಿದೆ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ, ಬಂಧು-ಬಳಗದವರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.