ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಸ್ನೇಹ ಬಳಗದ ವತಿಯಿಂದ ಇತ್ತೀಚೆಗೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ 2024-25ನೇ ಸಾಲಿನ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ವಿಜೇತ ನರಸಿಂಹಮೂರ್ತಿ ರವರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ವಾರ್ಡಿನ ಅಗ್ರಹಾರ ದಾಸರಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಸನ್ಮಾನ ಸಮಾರಂಭದಲ್ಲಿ ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ ಮೊದಲಿಗೆ ಸನ್ಮಾನಿಸಿ ಗೌರವಿಸಿದ ನಂತರ ನರಸಿಂಹಮೂರ್ತಿ ಮಾತನಾಡಿ ನನಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷನಾಗಿ ಜವಾಬ್ದಾರಿ ನೀಡಿ, ಅವರ ಮಾರ್ಗದರ್ಶನದಲ್ಲಿ ಹಲವಾರು ಯಶಸ್ಸಿ ಕಾರ್ಯಕ್ರಮಗಳನ್ನು ಮಾಡಲಾಗಿದೆ, ಮುಂಬರುವ ದಿನಗಳಲ್ಲಿ ನನ್ನ ಕನಸಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರಾದ ನಿವೃತ್ತ ಅಧಿಕಾರಿ ಡಾ. ಸಿ. ಸೋಮಶೇಖರ್ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕಷ್ಣರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ವೈಭವವಾಗಿ ಮಾಡಲು ತಯಾರಿ ನಡೆದಿದೆ.
ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಬರಲು ಕಾರಣರಾದ ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ಈ ಅವಕಾಶ ನೀಡಿರದಿದ್ದರೆ ಇಂದು ನನಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಅವಕಾಶ ಬರುತ್ತಲೇ ಇರಲಿಲ್ಲ ಎಂದರು.ಗೋವಿಂದರಾಜನಗರ, ವಿಜಯನಗರ, ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ನ ಆಯ್ದ ಭಾಗಗಳಲ್ಲಿ ಜೀವದ ಹಂಗು ತೊರೆದು ಮಹಾಮಾರಿ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರು ಹಾಗೂ ವಲಸೆ ಬಂದಿರುವ ಕಾರ್ಮಿಕರ ಹಸಿವು ನೀಗಿಸಲು ಪ್ರತಿ ದಿನ ಸುಮಾರು ಐದು ನೂರಕ್ಕೂ ಹೆಚ್ಚಿನ ಮಂದಿಗೆ ತಿಂಡಿ, ಊಟ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಿದ ಹಾಗೂ ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ನೀಡಿರುವುದು, ಅದನ್ನು ಸ್ವೀಕರಿಸುತ್ತಿರುವುದು ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಸಂದರ್ಭ ಎಂದೇ ಭಾವಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟವು ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್ ಬಾಲಾಜಿ ಅವರ ಸಾರಥ್ಯದಲ್ಲಿ ರಾಜ್ಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದ ಮನೆಮಾತಾಗಿದೆ ಎಂದರು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಈ ರೀತಿಯ ಪ್ರೋತ್ಸಾಹಿಸುವ, ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಮುಂದುವರಿಯಲಿ, ಆಗಲೇ ನಮಗೂ ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಉತ್ಸಾಹ ಬರುತ್ತದೆ ಎಂದು ಹೇಳಿದರು.