ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಸೈ ಎನ್ನಿಸಿಕೊಂಡು, ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡ ರಿಷಬ್, ಸದ್ಯ ಕಾಂತಾರದ ಧ್ಯಾನದಲ್ಲಿದ್ದಾರೆ.
ಶ್ರದ್ಧೆ ಮತ್ತು ಭಕ್ತಿಯಿಂದ ಚಿತ್ರ ಮತ್ತು ಪಾತ್ರಕ್ಕೆ ಜೀವ ತುಂಬಲು ಶ್ರಮಿಸುತ್ತಿದ್ದಾರೆ. ಕಾಂತಾರದ ಕೆಲಸಗಳಿಂದ ಬಿಡುವು ಪಡೆದು ಬಾಲಿವುಡ್ನತ್ತ ಕೂಡ ಮುಖ ಮಾಡಿದ್ದಾರೆ. ಛತ್ರಪತಿ ಶಿವಾಜಿ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದರ ನಡುವೆ ಪ್ರಭಾಸ್ ಜೊತೆ ರಿಷಬ್ ಶೆಟ್ಟಿ ಕೈ ಜೋಡಿಸಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ.
ಪ್ರಭಾಸ್ ಅಭಿಮಾನಿಗಳನ್ನು ಈ ಸುದ್ದಿ ಪುಳಕಿತಗೊಳಿಸಿದೆ. ಹೌದು, ನಿಮಗೆ ಗೊತ್ತು. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಈ ಹಿಂದೆ ಪ್ರಭಾಸ್ ಜೊತೆ ಮೂರು ಚಿತ್ರಗಳನ್ನು ಘೋಷಿಸಿತ್ತು. ಆ ಪೈಕಿ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ -02 ಕೂಡ ಒಂದು ಎಂದು ಹೇಳಿತ್ತು.
ಆದರೆ, ಇನ್ನೆರಡು ಚಿತ್ರಗಳ ವಿವರಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿರಲಿಲ್ಲ. ಹೀಗಾಗಿಯೇ ಪ್ರಭಾಸ್ ಅವರ ಈ ಎರಡು ಚಿತ್ರಗಳನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿತ್ತು. ಇದಕ್ಕೆ ಉತ್ತರ ಎನ್ನುವಂತೆ ರಿಷಬ್ ಶೆಟ್ಟಿ ಹೆಸರು ಸದ್ಯ ಕೇಳಿ ಬರುತ್ತಿದೆ. ಹಾಗಂಥ ರಿಷಬ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ. ಯಾಕೆಂದರೆ ಆಗಲೇ ಹೇಳಿದಂತೆ ರಿಷಬ್ ಈಗ ಕನ್ನಡ ಸ್ಟಾರ್ ಅಲ್ಲ. ಬದಲಿಗೆ ನ್ಯಾಷನಲ್ ಸ್ಟಾರ್ & ಡೈರೆಕ್ಟರ್. ಛತ್ರಪತಿ ಶಿವಾಜಿಯ ನಿರ್ದೇಶಕ ಸಂದೀಪ್ ಸಿಂಗ್ ಅವರಿಂದ ಹಿಡಿದು ಅನೇಕರು ರಿಷಬ್ ಅವರಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ತಮ್ಮ ಕಾಂತಾರ ಚಿತ್ರದ ಚಿತ್ರೀಕರಣವನ್ನು ಮುಗಿಸಿ ರಿಷಬ್ ಕುಂಬಳಕಾಯಿ ಒಡೆಯುವುದನ್ನೇ ಕಾಯುತ್ತಿದ್ದಾರೆ. ಹೀಗಾಗಿಯೇ ಪ್ರಭಾಸ್ಗೆ ನಿರ್ದೇಶನ ಮಾಡಲು ಒಲ್ಲೆ ಎಂದಿರುವ ರಿಷಬ್, ಪ್ರಭಾಸ್ಗೋಸ್ಕರ ಒಂದು ಅದ್ಭುತ ಕಥೆಯನ್ನು ಬರೆದುಕೊಡುವ ಭರವಸೆಯನ್ನು ಹೊಂಬಾಳೆ ಸಂಸ್ಥೆಗೆ ನೀಡಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ನ ‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆ ವರದಿ ಮಾಡಿದೆ. ರಿಷಬ್ ಹೇಳಿರುವ ಕಥೆಯ ಎಳೆಯನ್ನು ಕೇಳಿ ಪ್ರಭಾಸ್ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂದ್ಹಾಗೇ ಪ್ರಭಾಸ್ ಜೊತೆ ಮೂರು ಚಿತ್ರಗಳ ಒಪ್ಪಂದ ಮಾಡಿಕೊಂಡಿರುವ ಹೊಂಬಾಳೆ ಸಂಸ್ಥೆ ರಿಷಬ್ ಶೆಟ್ಟಿ ಅವರ ಜೊತೆ ಕೂಡ ನಾಲ್ಕು ಚಿತ್ರಗಳನ್ನು ಒಪ್ಪಂದ ಮಾಡಿಕೊಂಡಿದೆ ಎನ್ನುವ ಸುದ್ದಿ ಇದೆ. ಉಳಿದ ಮೂರು ಚಿತ್ರಗಳನ್ನು ಕೂಡ ಶೀಘ್ರದಲ್ಲಿಯೇ ರಿಷಬ್ ಮತ್ತು ಹೊಂಬಾಳೆ ಸಂಸ್ಥೆ ಘೋಷಿಸಲಿವೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇನ್ನುಳಿದಂತೆ ಪ್ರಭಾಸ್ ಸದ್ಯ ಪೌಜಿ ಚಿತ್ರವನ್ನು ಮಾಡುತ್ತಿದ್ದಾರೆ.