ತಿರುವನಂತಪುರಂ: ಕೇರಳದ ವಯನಾಡು ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆ ಎದುರಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ವಯನಾಡು ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ವರ ಫಲಿತಾಂಶ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ.ಪ್ರಿಯಾಂಕಾ ಗಾಂಧಿ ಅವರು ಸಿಪಿಐ(ಎಂ) ಅಭ್ಯರ್ಥಿ ಸತ್ಯನ್ ಮೊಕೆರಿ ಅವರಿಗಿಂತ 298,362 ಮತಗಳ ಮುನ್ನಡೆಯಲ್ಲಿದ್ದು, ಮಧ್ಯಾಹ್ನ 12ರ ಹೊತ್ತಿಗೆ 4,52,550 ಮತಗಳನ್ನು ಗಳಿಸಿದ್ದಾರೆ.
ವಯನಾಡಿನಲ್ಲಿ ಈಗಾಗಲೇ ಅಂಚೆ ಮತಗಳು ಹಾಗೂ ಸೇವಾ ಮತಗಳ ಎಣಿಕೆ ಮುಗಿದು, ಇವಿಎಂ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು, ಚೊಚ್ಚಲ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.