ಬೆಂಗಳೂರು: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಳೆ ಪ್ರತಿಭಟನೆ ನಡೆಸಲಿದೆ. ಗುತ್ತಿಗೆದಾರನ ಆತ್ಮಹತ್ಯೆಗೂ, ಖರ್ಗೆ ಅವರ ಕಚೇರಿಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದ್ದು, ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಿದೆ.
ಈ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾನು ಅವರನ್ನು ಸ್ವಾಗತಿಸುತ್ತೇನೆ, ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಅವರು ಸರಿಯಾಗಿ ನಡೆದುಕೊಂಡರೆ ನೀರು ಮತ್ತು ಎಳನೀರು ನೀಡುತ್ತೇವೆ. ಅನುಚಿತವಾಗಿ ವರ್ತಿಸಿದರೆ ಜೈಲಿಗೆ ಕಳುಹಿಸುತ್ತೇವೆ. ಪ್ರತಿಭಟನಾಕಾರರು ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬಿಜೆಪಿಯ ಕಾರ್ಯವೈಖರಿಯನ್ನು ಟೀಕಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್, ಬಿಜೆಪಿಗೆ ಬೇರೆ ಕೆಲಸವಿಲ್ಲ. ಪ್ರತಿಪಕ್ಷವಾಗಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗಿದೆ. ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಖರ್ಗೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪ್ರತಿಭಟನೆ ಮಾಡಬಹುದು ಎಂದಿದ್ದಾರೆ.
ಇದೇ ವೇಳೆ ಬಿಜೆಪಿಯ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ಬಿಜೆಪಿಯವರು ಮಾಡೋದು ಇದೊಂದೇ. ಗುತ್ತಿಗೆದಾರನ ಆತ್ಮಹತ್ಯೆ ತುಂಬಾ ದುಃಖಕರ. ಆದರೆ ಅದರಲ್ಲಿ ಪ್ರಿಯಾಂಕ್ ಖರ್ಗೆ ಯಾವ ರೀತಿಯಲ್ಲಿ ಶಾಮೀಲಾಗಿದ್ದಾರೆ? ದಿನಕ್ಕೊಂದು ರೈಲ್ವೆ ಅಪಘಾತಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕೇ?. ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯವಾಗಿ ತೆಗೆದುಕೊಂಡಿದ್ದಾರೆ. ನಾವು ಅವರನ್ನು (ಪ್ರತಿಭಟನಕಾರರನ್ನು) ಖಂಡಿತವಾಗಿ ಸ್ವಾಗತಿಸುತ್ತೇವೆ ಎಂದರು.
ಬೀದರ್ನ 26 ವರ್ಷದ ಗುತ್ತಿಗೆದಾರ ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕ ರಾಜು ಕಾಪನೂರ ಅವರ ಕಿರುಕುಳ ಮತ್ತು ಬೆದರಿಕೆ ಬಗ್ಗೆ ಡೆತ್ನೋಟ್ನಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದಿದೆ. ಆದರೆ, ಪ್ರಿಯಾಂಕ್ ಖರ್ಗೆ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಹಣಕಾಸಿನ ತೊಂದರೆ ಮತ್ತು ಒತ್ತಡದಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.